Online News in ಕನ್ನಡ

ಎಸ್‌ಎಸ್‌ಎಲ್‌ಸಿಯಲ್ಲಿ ಕಾಪಿ ಹೊಡೆಸಿ ಪಾಸ್‌ ಮಾಡಿದ್ದಾರೆ: ಅಡಗೂರು ವಿಶ್ವನಾಥ್‌ ಗಂಭೀರ ಆರೋಪ

ಮೈಸೂರು: ರಾಜ್ಯದಲ್ಲಿ ಶಿಕ್ಷಣದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಂಟರ್ನಲ್ಸ್‌ಗೆ ೨೦ ಅಂಕಗಳನ್ನು ನೀಡಿ, ಇನ್ನುಳಿದ ೮೦ ಅಂಕಗಳಲ್ಲಿ ೧೩ ಅಂಕ ಪಡೆದರೆ ಪಾಸಾಗುವ ವ್ಯವಸ್ಥೆ ಸರಿಯಿಲ್ಲ ಎಂದು ಮಾಜಿ ಶಿಕ್ಷಣ ಸಚಿವ, ವಿಧಾನ ಪರಿಷತ್‌ ಸದಸ್ಯ ಅಡಗೂರು ಹೆಚ್.ವಿಶ್ವನಾಥ್‌ ವಿಷಾದಿಸಿದ್ದಾರೆ.

ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅದರಲ್ಲೂ ಯಾದಗಿರಿಯಲ್ಲಿ ಶೇ.೪೧ರಷ್ಟು, ಬಳ್ಳಾರಿಯಲ್ಲಿ ಶೇ. ೩೧ರಷ್ಟು, ಬೀದರ್‌ನಲ್ಲಿ ಶೇ. ೨೧ರಷ್ಟು ಶಿಕ್ಷಕರ ಕೊರತೆ ಇದ್ದಾಗಿಯೂ ಎಸ್‌ಎಸ್‌ ಎಲ್‌ಸಿ ಫಲಿತಾಂಶದಲ್ಲಿ ಭಾರೀ ಏರಿಕೆ ಆಗಿರುವುದು ಅಚ್ಚರಿ ತಂದಿದೆ ಎಂದರು.

ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ೨ ಸಾವಿರ ಕೋಟಿ ರೂ. ಸಾಲ ಮಾಡಲಾಗಿದೆ. ಆ ಹಣದಲ್ಲಿ ಕಿಕ್‌ ಬ್ಯಾಕ್‌ ತಗೋತಾರೆ. ಮೌಲ್ಯ ಮಾಪನ ಕೇಂದ್ರಕ್ಕೆ ಶಿಕ್ಷಣ ಸಚಿವರೇ ಹೋಗ್ತಾರೆ. ಇಂಟರ್ನಲ್ಸ್‌ನಲ್ಲಿ ೨೦ಕ್ಕೆ ೨೦ ಅಂಕ ನೀಡುವಂತೆ ಸೂಚಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಓದುವ ಉತ್ಸಾಹವೇ ಕುಸಿದಿದೆ.

ಅನೇಕ ಸರಕಾರಿ ಶಾಲೆಗಳಲ್ಲಿ ಮೂಲಭೂತ ವ್ಯವಸ್ಥೆ ಇಲ್ಲ. ಸಿಬ್ಬಂದಿ, ಶಿಕ್ಷಕರ ಕೊರತೆ ಇದೆ. ಇಂತಹ ಸ್ಥಿತಿಯಲ್ಲಿ ದಾಖಲೆಯ ಫಲಿತಾಂಶ ಬರಲು ಹೇಗೆ ಸಾಧ್ಯ. ಇದರಿಂದ ಮುಂದೆ ಪಿಯುಸಿ ಶಿಕ್ಷಣದಲ್ಲಿ ಡ್ರಾಪ್‌ ಔಟ್‌ ಆಗುವ ಮಕ್ಕಳ ಸಂಖೆ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

Call Now Button