Online News in ಕನ್ನಡ

ಬರೀ ‘ ಅನ್ನ’ಕ್ಕೆ ಬಂದವರಿಗೆ ಮೃಷ್ಟಾನ್ನ ಭೋಜನ

ಚಿತ್ರಕ್ಕೆ ಜೀವಕಳೆ ತಂದುಕೊಟ್ಟ ಕಥೆ, ಭಾಷೆ, ಅಭಿನಯ, ಸಂಗೀತ

  • ಕೆ.ದೀಪಕ್
    ಅಕ್ಕಿ ಹಾಕಿವ್ನಿ ಅನ್ನಾವ ಬಸಿದಿನ್ವಿ
    ಒಂದರೆಗಳಿಗೆ ಅನ್ನ ಬಡಿಸ್ಬಿಟ್ಟು
    ಬತ್ತೀನಿ ಯಮದವ್ನೆ ಗಂಡಂಗ
    ಅನ್ನ ಬಡಿಸ್ಬುಟ್ಟು ಬತ್ತೀನಿ ನಡೆ ಮುಂದೆ…
    ಈ ಜಾನಪದ ಸಾಲುಗಳು ಅನ್ನದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅನ್ನ ಮನುಷ್ಯನ ಜೀವಧಾತು. ಗೌತಮನು ಇಡೀ ಮಾನವ ಜನಾಂಗವನ್ನು ಹತ್ತು ಭಾಗ ಮಾಡುವಾಗ ಅನ್ನಕ್ಕೆ ಎರಡನೇ ಸ್ಥಾನವನ್ನು ಕೊಟ್ಟಿದ್ದಾರೆ. ಇಂತಹ `ಅನ್ನ’ ಭಾರತದಲ್ಲಿ ಬಡವರ ಪಾಲಿಗೆ ಬಂಗಾರಕ್ಕಿಂತ ದುಬಾರಿ.
    ಕಾಲವೊಂದಿತ್ತು…ಯಾರ ಮನೆಯಲ್ಲಿ ಪ್ರತಿ ದಿನ ಅನ್ನ ಮಾಡುತ್ತಾರೆ ಅವರೇ ಶ್ರೀಮಂತರು ಎಂದು ಪರಿಣಿಸಲಾಗುತ್ತಿತ್ತು. ಆ ಕಾಲಮಾನದ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಹತ್ತಾರು ಕನಸ್ಸುಗಳನ್ನು ಹೊತ್ತು ನಮ್ಮ ನಿಮ್ಮ ನಡುವೆಯೆ ಓಡಾಡಿಕೊಂಡಿದ್ದ ಸೃಜಲಶೀಲ ಗೆಳಯರ ತಂಡ.
    ಇದೊಂದು ಚಾಮರಾಜನಗರ-ಕೊಳ್ಳೇಗಾಲದ ಜಾನಪದ ಸೊಗಡಿನ ಸುಂದರ ಜಾನಪದ ದೃಶ್ಯ ಕಾವ್ಯ. ದೇವಸ್ಥಾನದ ಬೆಲ್ಲದನ್ನದ ರುಚಿ ಕಂಡ ಹೈದ ಮಾದೇಶ ರಾಗಿ ಮುದ್ದೆಯನ್ನು ಧಿಕ್ಕರಿಸಿ ಅನ್ನಕ್ಕಾಗಿ ಹಂಬಲಿಸುವ ದೃಶ್ಯಗಳು ಶೋಷಿತ ಸಮುದಾಯಗಳಿಂದ ಬಂದ ಪ್ರತಿಯೊಬ್ಬರ ಬಾಲ್ಯವನ್ನು ನೆನಪಿಸುತ್ತದೆ.
    ಅವ್ವ ಸಿವಿಗೆ ಮಗನ ಹಸಿವಿನ ಚಿಂತೆ, ಮಗ ಮಾದೇವನಿಗೆ ಅನ್ನದ ಚಿಂತೆ, ಅಪ್ಪ ಚಿಕ್ಕಲಿಂಗನಿಗೆ ಕೂಲಿ ಅಕ್ಕಿಯ ಚಿಂತೆಯ ನಡುವೆ ಸಾಗುವ ಚಿತ್ರದಲ್ಲಿ ಗ್ರಾಮೀಣ ಜನರ ಬದುಕು-ಬವಣೆಯನ್ನು ಸುಂದರವಾಗಿ ಚಿತ್ರಿಸಲಾಗಿದೆ. ಬೆಟ್ಟದ ಮಾದಪ್ಪನ ಜಾತ್ರೆಯಲ್ಲಿ ಕಳೆದು ಹೋಗುವ ಮಾದೇಶ ಗದ್ದೆ ಬಯಲಿನ ಸಾಹುಕಾರ ಪಾನಗಾರನ ಮನೆ ಸೇರಿದರೆ, ಕಾಣೆಯಾದ ಮಗನಿಗಾಗಿ ಸಿವಿಯ ಗೋಳು ಕಲ್ಲು ಹೃದಯಗಳನ್ನೂ ಕರಗಿಸಿ, ಕೊರಗಿಸಿ ಹಿಂಡುತ್ತದೆ.
    ಪಡಬಾರದ ಪಾಡನ್ನೆಲ್ಲ ಪಟ್ಟು ಮಗ ಸಿಕ್ಕಾಗ ಆ ಸಿವಿಯ ಸಂತೋಷ, ಅನ್ನದ ಆಸೆಗೆ ಬಿದ್ದು ಮನೆಗೆ ಹಿಂದಿರುಗಲು ಒಪ್ಪದ ಮುಗ್ಧ ಮಾದೇವ, ಗ್ರಾಮೀಣರ ಹಾಡು-ಪಾಡು, ಹಾಸ್ಯ ಲಾಸ್ಯ, ಆಚಾರ ವಿಚಾರ, ಭಕ್ತಿ, ಮೌಢ್ಯ, ಮೂಡನಂಬಿಕೆ, ನೆರೆ ಹೊರೆಯ ಕಾಳಜಿ, ಶಾಲಾ ದೃಶ್ಯಗಳನ್ನು ಚೊಕ್ಕವಾಗಿ ಚಿತ್ರಿಸಲಾಗಿದ್ದು ಮಕ್ಕಳ ನಿರರ್ಗಳ ಮಾತು ಕಥೆ, ಸಹಜ ಅಭಿನಯ ತನುಮನಕ್ಕೆ ಮುದ ನೀಡುತ್ತದೆ. ರಾಯಣ್ಣನ ಮದುವೆ ಆಗುವ ಆಸೆಯ ಸನ್ನಿವೇಶಗಳು ಪ್ರೇಕ್ಷಕರನ್ನು ನಗಿಸದೆ ಇರಲಾರದು.
    ‘ಅನ್ನವನ್ನು ಕಾಲಿನಿಂದ ತುಳಿಯಬಾರದು, ತುಳಿದರೆ ಸಾಯೊ ಹೊತ್ತಿಗೆ ತುತ್ತು ಅನ್ನವು ಸಿಗೋದಿಲ್ಲ’ ಎಂಬ ನಂಬಿಕೆಯನ್ನು ಇಲ್ಲಿ ಬಿಂಬಿಸಲಾಗಿದೆ. `ಅಕ್ಕರಿಲ್ಲದ ಚಿಕ್ಕವ್ವ ಅಕ್ಕಿ ಹಾಕಿ ಅನ್ನ ಮಾಡಿ ಬರಿ ಬಾಯ್ಮಾತಿಗೆ ಬಾಬಾ ಅಂದ್ಲು’ ಎಂಬ ಗಾದೆಯೂ ಈ ಸಿನಿಮಾ ನೋಡುವಾಗ ನೆನಪಾಗುತ್ತದೆ. ಅವ್ವನ ಋಣ, ಅನ್ನದ ಋಣ ದೊಡ್ಡದು ಎಂಬ ಸಂದೇಶ ಈ ಚಿತ್ರದಲ್ಲಿ ಒಳಗೊಂಡಿದೆ.
    ಚಾಮರಾಜನಗ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಣ್ಣೂರು ಗ್ರಾಮವೇ ಈ ಕಥೆಯ ಕೇಂದ್ರಬಿಂದು. ಇಲ್ಲಿನ ಉಪ ಭಾಷೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿರುವುದು ಸಿನಿಮಾದ ಜೀವಾಳ. ಅಭಿನಯಕ್ಕೆ ಬರುವುದಾದರೆ ಸಿವಿ ಪಾತ್ರದಲ್ಲಿ ನಟಿಸಿರುವ ಪದ್ಮಶ್ರೀ ಸಿ.ಆರ್. ಪರಕಾಯ ಪ್ರವೇಶ ಮಾಡಿದ್ದಾರೆ. ಅನ್ನ ಚಿತ್ರದ ಸ್ಪೂರ್ತಿ ಮಾದೇವನಾದರೆ, ಶಕ್ತಿ ಪದ್ಮಶ್ರೀ.
    ಚಿಕ್ಕಲಿಂಗನ ಪಾತ್ರದ ಸಂಪತ್ ಮೈತ್ರೇಯ, ಮಾದೇವನ ಪಾತ್ರದ ನಂದನ್ ಜಿಎಂ ಅವರ ಸಹಜವಾಗಿ ಅಭಿನಯಿಸಿದ್ದರೆ, ಪಾನಗಾರ ಬಾಲ ರಾಜವಾಡಿ, ಸರೋಜಾ ಪತ್ರದ ಭುವನ, ನಂದಿನಿ ಪಾತ್ರದ ನಾಗಶ್ರೀ, ದಿಬ್ಬಜ್ಜ ಪಾತ್ರದ ಅಬ್ರಾಹಂ ಡಿಸಿಲ್ವ, ರಾಯಪ್ಪ ಪಾತ್ರದ ರಮೇಶ್ ಎಸ್.ಪಿ. ಹಾಗೂ ಸಹ ನಟು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಮಾವನ ಪಾತ್ರದಲ್ಲಿ ಬಂದು ಹೋಗುವ ನಾಗೇಶ್ ಕಂದೆಗಾಲ ಅವರು ಚಿತ್ರದ ಸಂಗೀತ ನಿರ್ದೇಶಕರಾಗಿ ಗೆದ್ದಿದ್ದಾರೆ.
    ಸಾಹಿತಿ, ಬರಹಗಾರ ಗಗನ ಪಿಚ್ಚರ್ ನಿರ್ಮಾಣದ `ಅನ್ನ’ ಚಿತ್ರದ ಅನ್ನದಾತ ನಿರ್ಮಾಪಕ ಬಸವರಾಜ್ ಎಸ್. ನಿರ್ದೇಶನ ಇಸ್ಮಾಮುದ್ದೀನ್ ಅವರು ಉತ್ತಮ ಪ್ರಯತ್ನ ಮಾಡಿದ್ದಾರೆ. ಸಿದ್ದು ಪ್ರಸನ್ನ ಅವರು ಡೈಲಾಗ್ ಬರೆದು ಸೈ ಎನಿಸಿಕೊಂಡಿದ್ದಾರೆ. ಒಟ್ಟಾರೆ, ಸಮಾನ ಮನಸ್ಕರ ತಂಡ ಒಂದು `ಅನ್ನ’ ಸಿನಿಮಾ ಮಾಡಿ ಕನ್ನಡಿಗರ ಮನ ಗೆದ್ದಿದೆ. ಅನ್ನಕ್ಕೆ ಬಂದವರಿಗೆ ಮೃಷ್ಟಾನ್ನ ಭೋಜನ ಫಿಕ್ಸ್.
Call Now Button