Online News in ಕನ್ನಡ

ವಿದ್ಯಾರ್ಥಿನಿಲಯ ವಿದ್ಯಾರ್ಥಿಗಳಿಗೆ ಕಲಾ ತರಬೇತಿ : ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಯೋಜನೆ

ಮೈಸೂರು, ಆಗಸ್ಟ್ 2, 2025 (vijayakaala.com) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಕಲಾ ತರಬೇತಿ ಉದ್ಘಾಟನೆ ಸಮಾರಂಭವನ್ನು ಶನಿವಾರ ಕರ್ನಾಟಕ ಕಲಾಮಂದಿರ ಅವರಣದ ಕಿರುರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ ಮಹದೇವಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ , ಸರ್ಕಾರವು ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಹೆಚ್ಚಿನ ರೀತಿಯ ಅನುದಾನವನ್ನು ಬಿಡುಗಡೆ ಮಾಡಿದ್ದು ಸರ್ಕಾರದ ಅಧಿನದಲ್ಲಿರುವ 35ಕ್ಕೂ ಹೆಚ್ಚಿನ ಇಲಾಖೆಗಳ ಮೂಲಕ ವಿವಿಧ ಯೋಜನೆಗಳನ್ನು ಆಯೋಜಿಸಿ ಪ್ರೋತ್ಸಾಹವನ್ನು ನೀಡುತ್ತಿದೆ. ಅದೇ ರೀತಿ ಸಮಾಜ ಕಲ್ಯಾಣ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಜೊತೆಗೂಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ವಿವಿಧ ಕಲಾ ಪ್ರಕಾರಗಳನ್ನು ಪರಿಚಯವನ್ನು ಮಾಡುವ ಉದ್ದೇಶದಿಂದ ಸುಗಮ ಸಂಗೀತ, ಜಾನಪದ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ ಇತ್ಯಾದಿ ಕಲೆಗಳನ್ನು ಕಲಿಸುವ ನಿಟ್ಟಿನಲ್ಲಿ ಕಲಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಈ ವಿಶಿಷ್ಟ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಕೆ.ಎಂ.ಗಾಯಿತ್ರಿ ಅವರು ಮಾತನಾಡಿ ಇಲಾಖೆಯಿಂದ ವಿವಿಧ ರೀತಿಯ ಯೋಜನೆಗಳನ್ನು ಹೊರತರಲಾಗಿದ್ದು ಸರ್ಕಾರವು ವಿವಿಧ ಯೋಜನೆಗಳಿಗೆ ವಿಶೇಷವಾದ ಅನುದಾನವನ್ನು ನೀಡುತ್ತಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಜಾರಿಯಲ್ಲಿದ್ದ ವಿವಿಧ ಕಾರ್ಯಕ್ರಮಗಳ ಜೊತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ ಕಲಾತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳಿಂದ ಮೊಬೈಲ್ ಬಳಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳನ್ನು ಹೊರತಂದು ಜಾನಪದ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅವರಲ್ಲಿ ಬೆಳಕು ಮೂಡಿಸುವುದು ಮೂಲ ಉದ್ದೇಶವಾಗಿದ್ದು ಮತ್ತು ಮುಂದಿನ ಪೀಳಿಗೆಗೆ ಜಾನಪದ ಸಾಹಿತ್ಯ ಕಲೆಗಳ ಕುರಿತು ತರಬೇತಿ ನೀಡುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಉಪಯೋಜನೆಯಡಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಈ ಕಲಾತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮಾನ್ವಯಾಧಿಕಾರಿ ಕೆ.ಎಂ.ಮಲ್ಲೇಶ್, ಪ.ವರ್ಗಗಳ ವಿದ್ಯಾರ್ಥಿನಿಲಯದ ನಿಲಯ ಪಾಲಕರದ ಸಿ.ಆರ್.ಗುರುಪ್ರಸಾದ್, ಪ.ಜಾತಿ ವಿದ್ಯಾರ್ಥಿನಿಲಯದ ನಿಲಯ ಪಾಲಕರಾದ ಸರಸ್ವತಿ ಹಾಗೂ ತರಬೇತುದಾರದ ದೇವಾನಂದ ವರಪ್ರಸಾದ್, ನಾರಾಯಣಸ್ವಾಮಿ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Call Now Button