Online News in ಕನ್ನಡ

ಫ್ರೀಡಂ ಪಾರ್ಕ್‌ನಲ್ಲಿ ಮರಗಳನ್ನು ಮಾರಣಹೋಮ : ಬಿಜೆಪಿ ದೂರು

ಬೆಂಗಳೂರು- ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಕಾಂಗ್ರೆಸ್‌‍ ನಾಯಕ ರಾಹುಲ್‌ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಮರಗಳನ್ನು ಮಾರಣಹೋಮ ಮಾಡಿರುವವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ದೂರು ನೀಡಿದೆ.
ಉಪ್ಪಾರಪೇಟೆ ಪೊಲೀಸ್‌‍ ಠಾಣೆಗೆ ಬಿಜೆಪಿಯ ಬೆಂಗಳೂರು ಕೇಂದ್ರ ಅಧ್ಯಕ್ಷ ಸಪ್ತಗಿರಿ ಗೌಡ ನೇತೃತ್ವದಲ್ಲಿ ದೂರು ನೀಡಲಾಗಿದ್ದು, ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಇದೊಂದು ಐತಿಹಾಸಿಕ ಸ್ಥಳವಾಗಿದ್ದು, ಕಾರ್ಯಕ್ರಮಕ್ಕಾಗಿ ಅನೇಕ ಮರಗಳನ್ನು ನೆಲಸಮ ಮಾಡಲಾಗಿದೆ. ಇದು ಕಾನೂನು ಉಲ್ಲಂಘನೆಯಾಗಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಬಿಜೆಪಿ ನೀಡಿದ ದೂರಿನಲ್ಲೇನಿದೆ?:
2024 ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌‍ ಪಕ್ಷದ ನಾಯಕರಾದ ರಾಹುಲ್‌ ಗಾಂಧಿಯವರು ಆಗಸ್ಟ್‌ 8 ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮಿಕೊಂಡಿದ್ದು, ಇದರ ಸಲುವಾಗಿ ಆನೇಕ ವರ್ಷಗಳಿಂದ ಇರುವ ಫ್ರೀಡಂ ಪಾರ್ಕ್‌ ತಡೆಗೋಡೆಯನ್ನು ನೆಲಸಮ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದಲ್ಲದೇ ಸಾರ್ವಜನಿಕರ ಆಸ್ತಿಯನ್ನು ನಷ್ಟಪಡಿಸಿ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ ಎಂದು ಉಲ್ಲೇಖಿಸಿದೆ.
ಈ ರೀತಿಯ ದುಷ್ಕೃತ್ವವನ್ನು ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯದೆ ಹಾಗೂ ಸಂಬಂಧಪಟ್ಟವರಿಗೆ ತಿಳಿಸದೇ ನಗರದ ಮಧ್ಯ ಭಾಗದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಆದ ತಡೆಗೋಡೆ (ಕಾಂಪೌಂಡ್‌‍) ಅನ್ನು ಕಾಂಗ್ರೆಸ್‌‍ ಪಕ್ಷದ ರಾಜಕೀಯ ಕಾರ್ಯಕ್ರಮ ನಡೆಸಲು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ಪ್ರಾಚೀನ ಕಾಲದ ಸಾರ್ವಜನಿಕರ ಆಸ್ತಿಯನ್ನು ನಾಶಪಡಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಬಿಜೆಪಿ ಆರೋಪಿಸಿದೆ.
ಯಾವುದೇ ರೀತಿಯ ಆಧೀಕೃತವಾದ ಪರವಾನಗಿ ಇಲ್ಲದೇ ಆಡಳಿತ ಪಕ್ಷದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಡೆಗೋಡೆಯನ್ನು (ಕಾಂಪೌಂಡ್‌) ನೆಲಸಮ ಮಾಡಿ ಕಾಂಕ್ರೀಟ್‌ ರಸ್ತೆಯನ್ನು ನಿರ್ಮಿಸಿರುವುದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಈ ದುಷ್ಕೃತ್ಯಕ್ಕೆ ಕಾರಣೀಭೂತರಾದ ಸದರಿ ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಂದು ಉಪ್ಪಾರಪೇಟೆ ಪೊಲೀಸರಿಗೆ ಬಿಜೆಪಿ ಮನವಿ ಮಾಡಿದೆ.
ಅನೇಕ ವರ್ಷಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಬೆಳೆದು ನಿಂತಿದ್ದ ದೊಡ್ಡ ಮರಗಳನ್ನು ಪ್ರತಿಭಟನೆಯ ಸಲುವಾಗಿ ಕಡಿದು ಹಾಕಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವುದಲ್ಲದೇ ಪರಿಸರವನ್ನು ನಾಶಪಡಿಸಿರುತ್ತಾರೆ. ಈ ರೀತಿಯ ದುಷ್ಕೃತ್ಯವನ್ನು ಮಾಡಲು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯದೇ ಹಾಗೂ ಸಬಂಧಪಟ್ಟವರಿಗೆ ತಿಳಿಸದೇ ನಗರದ ಮಧ್ಯ ಭಾಗದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಆಗಿ ಬೆಳೆದಿರುವ ಮರವನ್ನು ಕಾಂಗ್ರೆಸ್‌‍ ಪಕ್ಷದ ರಾಜಕೀಯ ಕಾರ್ಯಕ್ರಮವನ್ನು ನಡೆಸಲು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ, ಜನಸಾಮಾನ್ಯರಿಗೆ ತೊಂದೆಯನ್ನುಂಟು ಮಾಡಿರುತ್ತಾರೆ ಎಂದು ಬಿಜೆಪಿ ದೂರಿದೆ.
ಆಡಳಿತ ಪಕ್ಷದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮರಗಳನ್ನು ಕತ್ತರಿಸಿರುವುದು ಕಾನೂನು ಬಾಹಿರ. ಇದಕ್ಕೆ ಕಾರಣೀಭೂತರಾದ ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಿಜೆಪಿ ಆಗ್ರಹಿಸಿದೆ.

Call Now Button