ರಾಜ್ಯದಲ್ಲಿ ಶೇಕಡಾ 83 ರಷ್ಟು ಕಾರ್ಮಿಕರು ನೋಂದಣಿಯಾಗಿದ್ದಾರೆ : ಸಂತೋಷ್ ಎಸ್ ಲಾಡ್
ಮೈಸೂರು,ಆ.06- ರಾಜ್ಯದಲ್ಲಿ ಶೇ 83 ರಷ್ಟು ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಸಣ್ಣ ವೃತ್ತಿಯಲ್ಲಿ ತೊಡಗಿರುವ 91 ವರ್ಗದ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಡೀಸೆಲ್- ಪೆಟ್ರೋಲ್ ಮೇಲೆ 50 ಪೈಸೆ ಸೆಸ್ ಹೆಚ್ಚಿಸಿ ಅದನ್ನು ಕಾರ್ಮಿಕರ ಕಲ್ಯಾಣಕ್ಕೆ ನೀಡುವ ಚಿಂತನೆ ಇದೆ ಎಂದು ಕಾರ್ಮಿಕ ಸಚಿವರಾದ ಸಚಿವರಾದ ಸಂತೋಷ್ .ಎಸ್ .ಲಾಡ್ ಅವರು ಹೇಳಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಮೈಸೂರು ಇವರ ಸಹಯೋಗದಲ್ಲಿ ಮೈಸೂರು ಜಿಲ್ಲೆಯ ವಿವಿಧ ಸಂಘಟಿತ ಕಾರ್ಮಿಕರಿಗೆ “ಸ್ಮಾರ್ಟ್ ಕಾರ್ಡ್” ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ 25.55 ಲಕ್ಷ ಕಾರ್ಮಿಕರು ನೋಂದಣಿ ಆಗಿದ್ದಾರೆ. ಸಾರಿಗೆ ವಲಯದಲ್ಲಿ 10.55 ಲಕ್ಷ ಕಾರ್ಮಿಕರು ನೋಂದಣಿ ಆಗಿದ್ದಾರೆ. ಪತ್ರಿಕಾ ವಿತರಕರ ವರ್ಗದಲ್ಲಿ 7 ಸಾವಿರ ಅಸಂಘಟಿತ ಕಾರ್ಮಿಕರು ನೋಂದಣಿ ಆಗಿದ್ದಾರೆ ಎಂದು ತಿಳಿಸಿದರು.
ಸಾರಿಗೆ ವಲಯದಲ್ಲಿ ಅಪಘಾತ ಆಗಿ ಮರಣ ಹೊಂದಿದರೆ 5 ಲಕ್ಷ ಅಪಘಾತ ವಿಮೆ ನೀಡಲಾಗುತ್ತದೆ. ಇತರೆ ವರ್ಗದ ಕಾರ್ಮಿಕರು ಅಪಘಾತ ಆಗಿ ಮರಣ ಹೊಂದಿದರೆ 1 ಲಕ್ಷ ಅಪಘಾತ ವಿಮೆ, ಶಾಶ್ವತ ಅಂಗವಿಕಲತೆ ಉಂಟಾದರೆ 1 ಲಕ್ಷ , ಆಸ್ಪತ್ರೆ ವೆಚ್ಚ ಮರುಪಾವತಿ 50 ಸಾವಿರ, ಸಹಜ ಸಾವು ಸಂಭವಿಸಿದರೆ 10 ಸಾವಿರ ನೀಡಲಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ತಲಾ ಆದಾಯದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿ ಇದೆ. ಜಿಎಸ್ ಟಿ ಸಂಗ್ರಹದಲ್ಲೂ ಮುಂಚೂಣಿಯಲ್ಲಿದ್ದೇವೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಯಶಸ್ಸು ಕಾರಣ. ಆಶಾ ದೀಪ ಕಾರ್ಯಕ್ರಮದಲ್ಲಿ ಎಸ್ ಸಿ/ ಎಸ್ ಟಿ ವರ್ಗದವರಿಗೆ ಕೆಲಸ ನೀಡುವವರಿಗೆ ರೂ 7500 ವರೆಗೆ ನೆರವು ನೀಡಲಾಗುತ್ತಿದೆ. ಹೊರಗುತ್ತಿಗೆ ನೌಕರರು ಸೊಸೈಟಿ ಮೂಲಕ ಕಾರ್ಯ ನಿರ್ವಹಿಸಲಿದ್ದು, ಸಂಬಳ ಸಮಸ್ಯೆ ತಪ್ಪಲಿದೆ. ಮುಂದಿನ ದಿನಗಳಲ್ಲಿ ಮನೆ ಕೆಲಸ ಕಾರ್ಮಿಕರಿಗೆ ಕನಿಷ್ಢ ವೇತನ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ವಿಧಾನಸಭಾ ಶಾಸಕರಾದ ಕೆ ಹರೀಶ್ ಗೌಡ ಅವರು ಮಾತನಾಡಿ ಚಾಮರಾಜ ಕ್ಷೇತ್ರದಲ್ಲಿ 60 ಸಾವಿರ ಅಸಂಘಟಿತ ಕಾರ್ಮಿಕರಿದ್ದಾರೆ. ಸರ್ಕಾರದ ಯೋಜನೆಗಳ ಕುರಿತು ರಾಜ್ಯವ್ಯಾಪಿ ಪ್ರಚಾರ ನಡೆಸಬೇಕಿದೆ ಎಂದು ಹೇಳಿದರು.
ಅಸಂಘಟಿತ ವರ್ಗದ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರು ಸುಮಾರು 40 ಲಕ್ಷ ಇರು ವುದಾಗಿ ಅಂದಾಜಿಸಲಾಗಿದ್ದು, ಅವರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ
ಪ್ರತಿಯೊಬ್ಬ ಶ್ರಮಜೀವಿ ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುತ್ತಾರೆ. ಕೆಲಸ ಮಾಡುವಂತಹ ಪ್ರತಿಯೊಬ್ಬ ಅವರ ವೇತನ ಹೆಚ್ಚು ಕಡಿಮೆ ಇದ್ದರೂ ಕೂಡ ಶ್ರಮ ವಹಿಸುವವರು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುತ್ತಾರೆ. ಅದು ಬಹುಶಃ ವೇತನ ಎನ್ನುವುದು ಉನ್ನತ ಹುದ್ದೆಯಿಂದ ಹಿಡಿದು ಕಟ್ಟ ಕಡೆಯ ಮನುಷ್ಯನವರೆಗೂ ಪ್ರತಿಯೊಬ್ಬ ಶ್ರಮಜೀವಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಲ್ಲಿ ಬರುವಂತದ್ದು ಎಂದು ಹೇಳಿದರು.
ಕೃಷ್ಣರಾಜನಗರ ವಿಧಾನಸಭೆ ಕ್ಷೇತ್ರದ ಶಾಸಕರಾದ ರವಿಶಂಕರ್ .ಡಿ ಅವರು ಮಾತನಾಡಿ ಸಂತೋಷ್ ಎಸ್ ಲಾಡ್ ಅವರು ಅಧಿಕಾರವನ್ನು ಸ್ವೀಕರಿಸಿದ ಮೇಲೆ ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ರೀತಿಯಲ್ಲಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಮ್ಮ ಕಾರ್ಮಿಕರಿಗೆ ಯಾವುದೇ ಸಂದರ್ಭದಲ್ಲಿ ಏನೆ ತೊಂದರೆ ಆದರೂ ಕೂಡ ನಾವು ನಿಮ್ಮ ಜೊತೆಯಲ್ಲೇ ಇರುತ್ತೇವೆ ಎಂಬ ನಿಟ್ಟಿನಲ್ಲಿ ಕಾರ್ಮಿಕರಿಗೆ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ ಎಂದು ಹೇಳಿದರು.
ನಮ್ಮ ಕ್ಷೇತ್ರದಲ್ಲಿ ಬಹಳಷ್ಟು ಜನ ಕಾರ್ಮಿಕರು ಇದ್ದಾರೆ ಕಾರ್ಮಿಕರು ಬಹಳಷ್ಟು ಜನ ನೋಂದಣಿಯನ್ನು ಮಾಡಿಕೊಂಡಿಲ್ಲ, ಆ ಕಾರಣದಿಂದ ಇಲಾಖೆಯ ಅಧಿಕಾರಿಗಳು ನೋಂದಣಿ ಮಾಡಿಸುವ ಕೆಲಸವನ್ನು ಮಾಡಬೇಕು. ಎಲ್ಲಾ ಹೋಬಳಿ ಮಟ್ಟದಲ್ಲಿ ಕೂಡ ನೋಂದಣಿ ಮಾಡಿಸುವ ಕೆಲಸದ ಜವಾಬ್ದಾರಿಯನ್ನು ಅಧಿಕಾರಿಗೆ ಕೊಡಬೇಕು. ಸಮಾಜದಲ್ಲಿ ಇರುವಂತಹ ಇನ್ನೂ ಹೆಚ್ಚಿನ ಕಾರ್ಮಿಕರಿಗೆ ಸೌಲಭ್ಯಗಳು ಸಿಗುವಂತ ನಿಟ್ಟಿನಲ್ಲಿ ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಮಿಕರು ನಿಮಗೆ ಇದರ ಬಗ್ಗೆ ಹೆಚ್ಚು ಹೆಚ್ಚಾಗಿ ಮಹತ್ವ ತಿಳಿದು ಸ್ಮಾರ್ಟ್ ಕಾರ್ಡ್ ಯೋಜನೆ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಬೇಕು. ಆಕಸ್ಮಿಕವಾಗಿ ಏನಾದರೂ ಘಟನೆಗಳು ನಡೆದು ಮೃತಪಟ್ಟ ಸಂದರ್ಭದಲ್ಲಿ ಹೇಗೆ ಅವರ ಕುಟುಂಬದವರಿಗೆ ತೊಂದರೆಗಳು ಆಗುವಂತಹ ಸಂದರ್ಭದಲ್ಲಿ ಈ ಒಂದು ಸ್ಮಾರ್ಟ್ ಕಾರ್ಡ್ ನಿಂದ ಸಾಕಷ್ಟು ಸೌಲಭ್ಯಗಳು ಉಪಯುಕ್ತವಾಗುತ್ತವೆ. ಎಲ್ಲರೂ ಈ ನೋಂದಣಿಯನ್ನು ಮಾಡಿಸಿಕೊಂಡು ಸ್ಮಾರ್ಟ್ ಕಾರ್ಡ್ ಪಡೆಯಬೇಕು ಎಂದು ಹೇಳಿದರು.
ವಿಧಾನ ಪರಿಷತ್ತಿನ ಶಾಸಕರಾದ ಡಾ. ಯತೀಂದ್ರ ಅವರು ಮಾತನಾಡಿ ಕಾರ್ಮಿಕ ಇಲಾಖೆಯು ಸ್ಮಾರ್ಟ್ ಕಾರ್ಡ್ ನ್ನು ನೀಡುತ್ತಿದ್ದು, ಇದು ಉತ್ತಮವಾದ ಯೋಜನೆಯಾಗಿದೆ. 83% ಜನ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಇದ್ದು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವ ಕಾರ್ಮಿಕರಿಗೆ ಸರ್ಕಾರ ಸೌಲಭ್ಯಗಳನ್ನು ನೀಡಿ ಕಾರ್ಮಿಕರನ್ನು ಬೆಂಬಲಿಸುವುದು ಅವರ ಜೀವನಕ್ಕೆ ಆಧಾರವನ್ನು ಒದಗಿಸಿ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅನೇಕ ಪ್ರವರ್ಗಗಳು, ದಲಿತ ಸಮುದಾಯದ ವರ್ಗಗಳು ಅಲೆಮಾರಿ ಸಮುದಾಯಗಳು ಇನ್ನೂ ಅನೇಕ ಸಮುದಾಯಗಳನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಲಾಗಿದೆ. ಇದರಿಂದ ಬಹಳಷ್ಟು ಜನರಿಗೂ ಸಹ ಅನುಕೂಲವಾಗುತ್ತದೆ. ಇದರ ಜೊತೆ ಕಾರ್ಮಿಕ ಇಲಾಖೆಯಲ್ಲಿ ಅವರದೇ ಆದ ಫಿಕ್ಸ್ ಡಿಪಾಸಿಟ್ ಇಟ್ಟುಕೊಂಡಿದ್ದಾರೆ. ಅದರ ಮೂಲಕವೂ ಕೂಡ 1 ಲಕ್ಷ ದ ಮೂಲಕ ವಿಮೆ ಮಾಡಬೇಕು. ಕಾರ್ಮಿಕ ಇಲಾಖೆಯು ಸಾಮಾಜಿಕ ಕಳಕಳಿಯಿಂದ ಜನರಿಗೆ ಒಳ್ಳೆಯದನ್ನು ಮಾಡುವಂತಹ ಇಲಾಖೆಯಾಗಿದೆ. ಸಾಮಾಜಿಕ ಕಾಳಜಿಯೊಂದಿಗೆ ಕೆಲಸ ಮಾಡುತ್ತಿದೆ ಎಂದರು.
ಈ ಬಾರಿ ಮೈಸೂರು ಜಿಲ್ಲೆಯಲ್ಲಿ ವಸತಿ ಶಾಲೆಯನ್ನು ಕಾರ್ಮಿಕರ ಮಕ್ಕಳಿಗಾಗಿ ಶಿಪಾರಸ್ಸು ಮಾಡಲಾಗಿದ್ದು, ಅದನ್ನು ವರುಣ ಕ್ಷೇತ್ರದಲ್ಲಿ ತೆರೆಯಲಾಗುತ್ತದೆ. ಅಷ್ಟೇ ಅಲ್ಲದೆ ಕಾರ್ಮಿಕ ಇಲಾಖೆಯಿಂದ ಅಸ್ಸಾಂ ಮತ್ತು ಒರಿಸ್ಸಾ ದಲ್ಲಿ ತರಬೇತಿ ನೀಡುವಂತಹ ಸ್ಕಿಲ್ಸ್ ಸೆಂಟರ್ ಗಳನ್ನು ಇಲ್ಲಿಯೂ ಸಹ ಮಾಡಬೇಕೆಂದು ಅದನ್ನು ಸಹ ನಮ್ಮ ಮೈಸೂರು ಜಿಲ್ಲೆಗೆ ಮಾಡಿ ಕೊಡಲಾಗಿದ್ದು ಅದನ್ನು ಸಹ ವರುಣ ಕ್ಷೇತ್ರದಲ್ಲಿ ಸ್ಥಾಪಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮಿಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯಕೇಶ್ ಕುಮಾರ್, ಅಪರ ಕಾರ್ಮಿಕ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿಗಳಾದ ಡಾ. ಎಸ್. ಬಿ ರವಿಕುಮಾರ್ , ಕಾರ್ಮಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


