ಬೆಂಗಳೂರು: ಸ್ವಾತಂತ್ರ್ಯ ವೀರರ ಕಥಾಹಂದರವನ್ನು ಹೊಂದಿರುವ ಮತ್ತೊಂದು ಚಿತ್ರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲು ಅಣಿಯಾಗುತ್ತಿದೆ. ವಿಭಿನ್ನ ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡಿರುವ ಬಹುಮುಖ ಪ್ರತಿಭೆಯ ನಟ ಡಾಲಿ ಧನಂಜಯ್ ಮೊದಲ ಬಾರಿಗೆ ಐತಿಹಾಸಿ ಚಿತ್ರಕ್ಕೆ ಬಣ್ಣ ಹಚ್ಚಿದ್ದು, ಕೈಯಲ್ಲಿ ಕೊಳ್ಳಿ ಹಿಡಿದುಕೊಂಡು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರೀತಿ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ.
ಒಂದು ಆಯುಧಕ್ಕಾಗಿ ನಡೆದ ಕೊಲೆಗಳು, ಅದರ ಸುತ್ತಲಿನ ಹೋರಾಟ ಎಳೆಯನ್ನು ಇಟ್ಟುಕೊಂಡು “ಹಲಗಲಿ” ಕಥೆ ಕಟ್ಟಿದ್ದಾರೆ ನಿರ್ದೇಶಕ ಸುಕೇಶ್ ನಾಯಕ್. ಇದಕ್ಕೆ ಒಪ್ಪುವಂತೆ ಬಂಡವಾಳ ಹೂಡಿದ್ದಾರೆ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ಇನ್ನು ನಿನ್ನೆಯಷ್ಟೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಡಾಲಿಗೆ ಜೊತೆಯಾಗಿ ಸಪ್ತಮಿಗೌಡ ತೆರೆ ಹಂಚಿಕೊಂಡಿದ್ದಾರೆ. ಅವರದ್ದು ಇಲ್ಲಿ ಹೊನ್ನಿಯ ಪಾತ್ರ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ಸಪ್ತಮಿ ಗೌಡ ಉತ್ತರ ಕರ್ನಾಟಕ ಶೈಲಿಯ ಭಾಷೆಯನ್ನೂ ಕಲಿತುಕೊಂಡಿದ್ದಾರೆ.
ಈ ಚಿತ್ರದ ಮೂಲಕ ನನ್ನ ಆಸೆ ಈಡೇರಿದೆ
ಪೋಸ್ಟರ್ ಬಿಡುಗಡೆ ವೇಳೆ ಮಾತನಾಡಿದ ಡಾಲಿ ಧನಂಜಯ್, ಈ ಸಿನಿಮಾದಲ್ಲಿ ನಾನು ಜಡಗ ಎಂಬ ಪಾತ್ರ ಮಾಡಿದ್ದೇನೆ. ಇದಕ್ಕೆ ನಿರ್ದೇಶಕರು ಹಾಗೂ ನಿರ್ಮಾಪಕರು ನಿಜವಾದ ಹೀರೋಗಳು. ನಾನು ಮೊದಲಿನಿಂದಲೂ ಐತಿಹಾಸಿಕ ಸಿನಿಮಾ ಮಾಡಬೇಕು ಎಂದು ಹೇಳುತ್ತಿದ್ದೆ. ಅದು ಈಗ ನೆರವೇರುತ್ತಿದೆ. ಹಲಗಲಿ ಸ್ಕ್ರೀಪ್ಟ್ ಬಹಳ ಚೆನ್ನಾಗಿದೆ, ಓದುತ್ತಾ ಓದುತ್ತಾ ಖುಷಿಯಾಯ್ತು. ಇಡೀ ತಂಡ ಬಹಳ ಷ್ಯಾಷನೇಟೆಡ್ ಆಗಿ ಕೆಲಸ ಮಾಡುತ್ತಿದೆ. ರೀತಿ ಸಿನಿಮಾಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಉತ್ತರ ಕರ್ನಾಟಕ ಭಾಷೆ ಕಲಿತೆ
ನಟಿ ಸಪ್ತಮಿ ಗೌಡ ಮಾತನಾಡಿ, ನನ್ನ ಪಾತ್ರದ ಹೆಸರು ಹೊನ್ನಿ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದೆ. ನಾನು ಈ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಷೆ ಕಲಿತಿದ್ದೇನೆ. ನನ್ನ ಲುಕ್ ವಿಭಿನ್ನವಾಗಿದೆ. ತುಂಬಾ ರಫ್ ಅಂಡ್ ಸ್ಟ್ರೈಟ್ ಪಾತ್ರ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ಕಥೆಯ ಬಗ್ಗೆ ಆಸಕ್ತಿ ಹುಟ್ಟಿ ಸಿನಿಮಾ ಮಾಡಿದೆ
ನಿರ್ದೇಶಕ ಸುಕೇಶ್ ನಾಯಕ್ ಮಾತನಾಡಿ, ನನಗೆ ಐತಿಹಾಸಿಕ ಬುಕ್ಸ್ ಅಂದರೆ ಇಷ್ಟ. ಬುಕ್ ಓದುವ ಟೈಮ್ ನಲ್ಲಿ ಹಲಗಲಿ ಎಂಬುವುದು ತಲೆಗೆ ಬಂತು. ಒಂದು ಆಯುಧಕ್ಕಾಗಿ ಇಡೀ ಊರೇ ಪ್ರಾಣ ಕೊಟ್ಟಿದ್ದರು ಎಂಬುವುದು ನನಗೆ ಆಸಕ್ತಿ ಹುಟ್ಟುಹಾಕಿತು. ಅದೇ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಈಗಾಗಲೇ 40% ಶೂಟಿಂಗ್ ಮುಗಿದಿದೆ. ಫಸ್ಟ್ ಶೆಡ್ಯುಲ್ಡ್ ಮೈಸೂರಿನಲ್ಲಿ ಮಾಡಿದ್ದೇವು. ಬಳಿಕ ನೆಲಮಂಗಲದಲ್ಲಿ ಅದ್ಧೂರಿ ಸೆಟ್ ಹಾಕಿ ಸಿನಿಮಾ ಮಾಡುತ್ತಿದ್ದೇವೆ ಎಂದರು.
ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಚಿತ್ರ ಮೂಡಿ ಬರಲಿದ್ದು, ಈಗಾಗಲೇ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ವಾಸುಕಿ ವೈಭವ್ ಸಂಗೀತ, ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ ಸಾಹಸ ಚಿತ್ರಕ್ಕಿದೆ.


