ಬೆಂಗಳೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸಲು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ ಅವರಿಗೆ ಜಿಲ್ಲಾಡಳಿತದ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು.
ಪ್ರತಿವರ್ಷದಂತೆಯೇ ಈ ವರ್ಷವೂ ನಾಡಹಬ್ಬವನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಈಗಲಾಗಲೇ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ದಸರಾ ಉದ್ಘಾಟಕರಾಗಿ ಈ ಬಾರಿ ಆಯ್ಕೆಯಾಗಿರುವ ಸಾಹಿತಿ ಬಾನು ಮುಷ್ತಾಕ್ ಅವನ್ನು ಈಗಲಾಗಲೇ ಅವರ ಹಾಸನದಲ್ಲಿರುವ ನಿವಾಸಕ್ಕೆ ತೆರಳಿ ಜಿಲ್ಲಾಡಳಿತ ಆಹ್ವಾನ ಮಾಡಿದೆ. ಇನ್ನು ವಿವಿಧ ಇಲಾಖೆ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಅವನ್ನೂ ಕೂಡ ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನಿಸುವ ಕೆಲಸ ಆಗಲಿದೆ.
ಯುವ ಸಂಭ್ರಮ ಪೋಸ್ಟರ್ ಬಿಡುಗಡೆ

ತಮ್ಮ ನಿವಾಸದಲ್ಲಿ ದಸರಾಗೆ ಆಹ್ವಾನ ಸ್ವೀಕರಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಯುವ ಸಂಭ್ರಮ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು. ಈ ವೇಳೆ ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮಹಾನಗರ ಪಾಲಿಕೆ ಆಯುಕ್ತರಾದ ಶೇಕ್ ತನ್ವಿರ್ ಆಸಿಫ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಮತ್ತು ಸ್ವಾಗತ ಸಮಿತಿಯವರು ಉಪಸ್ಥಿತರಿದ್ದರು.


