ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿಯಲ್ಲಿ ‘ಕೆಲಸ, ವಾಸ, ಉಲ್ಲಾಸ‘ ಪರಿಕಲ್ಪನೆ ಅಡಿಯಲ್ಲಿ ಬಿಡದಿ ಸಮಗ್ರ ಉಪನಗರ ನಿರ್ಮಾಣವಾಗುತ್ತಿದೆ. ದೇಶದಲ್ಲೇ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ನಗರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
‘ಗ್ರೇಟರ್ ಬೆಂಗಳೂರು ಇನ್ನೋವೇಶನ್ ಆ್ಯಂಡ್ ಟೆಕ್ ಸಿಟಿ’ಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, 2006ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರಾಮನಗರ, ಸೋಲೂರು, ಸಾತನೂರು, ಬಿಡದಿ ಸೇರಿದಂತೆ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ನಿರ್ಮಾಣ ಮಾಡಲು ಹೊರಟು, ಗ್ಲೋಬಲ್ ಟೆಂಡರ್ ಸಹ ಕರೆದಿದ್ದರು. ಈಗ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಮಾಡಲು ನಾವು ಬಯಸಿದ್ದೇವೆ. ಬಿಡದಿ ಟೌನ್‌ಶಿಪ್ ಯೋಜನೆ ಒಮ್ಮೆ ನೋಟಿಫಿಕೇಷನ್ ಆದ್ಮೇಲೆ ಮತ್ತೆ ಡಿನೋಟಿಫೈ ಮಾಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ನಮ್ಮ ಉದ್ದೇಶ ಒಂದೇ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕು. ಆಸ್ತಿ ಮೌಲ್ಯ ಹೆಚ್ಚಾಗಬೇಕು. ಆಸ್ಪತ್ರೆ, ಕೈಗಾರಿಕೆ, ಎಐ ಎಲ್ಲವೂ ನಮ್ಮ ಜಿಲ್ಲೆಗೆ ಬರಬೇಕು. ಎಐ ಸಿಟಿಯಾಗಿ ನಮ್ಮ ನಗರ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಮೆಟ್ರೋ ಕೂಡ ಇಲ್ಲಿಗೆ ಬರಬೇಕು ಎನ್ನುವುದು ಎಂದು ತಿಳಿಸಿದ್ದಾರೆ.
ದೇಶದ ಮೊದಲ ಎಐ ನಗರ
ಎಐ ನಗರ ಯೋಜನೆಗಾಗಿ ಬಿಡದಿ ಬಳಿಯ ಒಂಬತ್ತು ಗ್ರಾಮಗಳ 8,493 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಭೂಮಿ ಕಳೆದುಕೊಂಡವರಿಗೆ 2013ರ ಭೂ ಸ್ವಾಧೀನ ಕಾಯ್ದೆ ಅಡಿ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪ್ರತಿ ಎಕರೆಗೆ ರೂ.1.50 ಕೋಟಿಯಿಂದ ರೂ.2.50 ಕೋಟಿವರೆಗೆ ಪರಿಹಾರ ಲಭ್ಯವಾಗಲಿದೆ. ಪರಿಹಾರದ ಹಣ ಬೇಡ ಎಂದರೆ ಬದಲು ಯೋಜನೆಯ ಸಹಭಾಗಿತ್ವ ಪಡೆಯಲೂ ಅವಕಾಶ ಇದೆ. ವಸತಿ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ 50:50 ಅನುಪಾತದಲ್ಲಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಪ್ರದೇಶದಲ್ಲಿ 45:55 ಅನುಪಾತದಲ್ಲಿ ನಿವೇಶನ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್, ಎಚ್.ಸಿ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಆಯುಕ್ತ ರಾಜೇಂದ್ರ ಪಿ. ಚೋಳನ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

