ಮೈಸೂರು: ಮಹರ್ಷಿ ವಾಲ್ಮೀಕಿ ಅವರು ಬಡತನದಲ್ಲಿ ಹುಟ್ಟಿ ತಮ್ಮ ತಪಸ್ಸಿನ ಮೂಲಕ ಅಸಾಧಾರಣವಾದ ಬುದ್ಧಿ ಶಕ್ತಿಯನ್ನು ಗೆದ್ದವರು. ಇಡೀ ಪ್ರಪಂಚಕ್ಕೆ ಧರ್ಮದ ಮೌಲ್ಯವನ್ನು, ನೈತಿಕತೆಯನ್ನು ನೀಡಿದವರು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ ಮಹದೇವಪ್ಪ ತಿಳಿಸಿದರು.
ಇಂದು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮೈಸೂರು ನಗರ ಮತ್ತು ತಾಲ್ಲೂಕು ನಾಯಕ ಜನಾಂಗದ ಸಂಘಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಧಾನ ಸೌಧದಲ್ಲಿ 3 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಇಡೀ ಪ್ರಪಂಚವನ್ನು ಒಳಗೊಂಡ ದೊಡ್ಡ ರಾಮಾಯಣವನ್ನು ರಚಿಸಿದವರು ವಾಲ್ಮೀಕಿ ಮಹರ್ಷಿಗಳು. ಜ್ಞಾನ ಶಕ್ತಿಯ ಮೂಲಕ ಮೇಧಾವಿ ಯಾದವರು. ರಾಮನನ್ನು ರಾಮಾಯಣದ ಮೂಲಕ ಸೃಷ್ಟಿ ಮಾಡಿದವರು ಹಾಗೂ ನೈತಿಕ ವಿಷಯವನ್ನು ರಾಮಾಯಣದಲ್ಲಿ ಧರ್ಮ ಪಾಲನೆ ಮಾಡಿದವರು. ಸಾಮಾಜಿಕ ಆರ್ಥಿಕ, ಸಮಾನತೆಯ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬಿತ್ತಿದವರು ಮಹರ್ಷಿಗಳು ಎಂದು ತಿಳಿಸಿದರು..
ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ, ಕೆಲವೇ ಜಾತಿ, ಧರ್ಮದ ಆದಾರಲ್ಲಿ ಮನುಷ್ಯ ಬದುಕಲು ಸಾಧ್ಯವಿಲ್ಲ, ಶಿಕ್ಷಣ ನಮ್ಮ ಮೂಲ ಮುದ್ರೆಯಾಗಬೇಕು. ಶಿಕ್ಷಣ ಪಡೆದು ಸಮಾಜವನ್ನು ಮುನ್ನಡೆಸಬೇಕು. ಇತಿಹಾಸವನ್ನು ತಿಳಿದು ಬದುಕಿದಾಗ ಸಮುದಾಯವು ಮುಂದೆ ಬರುತ್ತದೆ ಎಂದು ಹೇಳಿದರು.
ಶಾಸಕರಾದ ಜಿ. ಟಿ ದೇವೇಗೌಡ ಮಾತನಾಡಿ, ತಮ್ಮ ಜ್ಞಾನದ ಮೂಲಕ ಸುಜ್ಞಾನದ ಬೆಳಕನ್ನು ನೀಡಿದ ಮಹಾನ್ ಜ್ಞಾನಿ ಮಹರ್ಷಿ ವಾಲ್ಮೀಕಿ. ರಾಮಾಯಣ ಎಂಬ ಮಹಾ ಕಾವ್ಯವನ್ನು ಬರೆಯುವುದರ ಮೂಲಕ ಅಮರರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ಜಗದ ರತ್ನ. ಅವರು ತಮ್ಮ ಜ್ಞಾನದ ಮೂಲಕ ಲವ-ಕುಶ ರ ಜೀವನವನ್ನು ಹೇಗೆ ಪಾರಂಗತ ಮಾಡಿದ್ದಾರೆ ಹಾಗೆಯೇ ನಮ್ಮ ಮಕ್ಕಳಿಗೂ ಶಿಕ್ಷಣವನ್ನು ನಾವು ನೀಡಬೇಕು ಎಂದು ಹೇಳಿದರು.
ಶಾಸಕರಾದ ಕೆ. ಹರೀಶ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹಿರಿಯ ಕಾನೂನು ಸಹಾಯಕ ಪ್ರಾಧ್ಯಾಪಕರಾದ ಡಾ. ರಂಗಸ್ವಾಮಿ, ಶಾಸಕರಾದ ಡಾ ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಸೇರಿ ಅಧಿಕಾರಿಗಳು, ಸಮುದಾಯದ ಮುಖಂಡರು ಭಾಗಿಯಾಗಿದ್ದರು.


