ಹುಣಸೂರು: ಪಟ್ಟಣದ ಗೋಕುಲ ಬಡಾವಣೆ ನಿವಾಸಿ ವಕೀಲ ಕೆ.ರಾಜು (52) ಶವ ಲಕ್ಷ್ಮಣತೀರ್ಥ ನದಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ಮೂಡಿದೆ.
ನಿನ್ನೆ ಆಫೀಸ್‌ಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದ ವಕೀಲ ರಾಜು ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಇದರಿಂದ ಹೆದರಿದ ಕುಟುಂಬಸ್ಥರು ಮತ್ತು ಪತ್ನಿ ವಸಂತ ಲಕ್ಷ್ಮೀ ಅವರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಂದು ಬೆಳಿಗ್ಗೆ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿ ಸೇತುವೆ ಬಳಿ ವಕೀಲರ ಕಾರು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನದಿಗೆ ಇಳಿದು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ರಾಜು ಅವರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


