ಮೈಸೂರು: ನನ್ನ ತಂದೆ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಈವರೆಗೆ ಒಳ್ಳೆಯ ಆಡಳಿತ ನೀಡಿದ್ದಾರೆ. ಶಾಸಕರು ಅವರ ಪರ ಇದ್ದಾರೆ. ಅಂದ ಮೇಲೆ ಅವರನ್ನು ಏಕೆ ಬಸಲಿಸಬೇಕು ಎನ್ನುವುದ ನನ್ನ ವೈಯಕ್ತಿಕ ಪ್ರಶ್ನೆ ಎಂದು ತಂದೆ ಸಿಎಂ ಸಿದ್ದರಾಮಯ್ಯ ಅವರನ್ನು ಬಲವಾಗಿ ಸಮರ್ಥಿಸಿಕೊಂಡ ಪುತ್ರ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಳ್ಳೆಯ ರೀತಿಯಲ್ಲಿ ಸರಕಾರ ನಡೆಸುತ್ತಿರುವ ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್‍ದ ಹೈಕಮಾಂಡ್ ಎಲ್ಲೂ ಸಹ ನಾಯಕತ್ವ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ನನಗೆ ವಿಶ್ವಾಸವಿದೆ, ನನ್ನ ತಂದೆ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುರೆಯುತ್ತಾರೆ. ನನಗೆ ಮಾಹಿತಿ ಇರುವ ಪ್ರಕಾರ ಅಧಿಕಾರ ಹಂಚಿಕೆ ಸೂತ್ರವೇ ರಚನೆಯಾಗಿಲ್ಲ. ನನ್ನ ತಂದೆಯಾಗಲಿ, ಕೆಲ ಹಿರಿಯ ಸಚಿವರಾಗಲಿ ಯಾವತ್ತೂ ಈ ಬಗ್ಗೆ ನನಗೆ ಹೇಳಿಲ್ಲ. ಅಂದಮೇಲೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿಲ್ಲ ಅಂತ ಅರ್ಥವಲ್ಲವೇ ? ಎಂದು ಮರು ಪ್ರಶ್ನೆ ಹಾಕಿದರು.
ಯಾರಿಗೆ ಎಷ್ಟು ಜನ ಶಾಸಕರ ಬೆಂಬಲವಿದೆ ಎನ್ನುವುದು ಪಕ್ಷದ ಆಂತರಿಕ ವಿಷಯಕ್ಕೆ ಬಿಟ್ಟು ವಿಚಾರ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಕೆಲವರು ನಾಯಕತ್ವ ಬದಲಾವಣೆ ವಿಷಯ ಮಾತನಾಡಿದ್ದಾರೆ. ಈ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಆದಿಚುಂಚನಗಿರಿ ಮಠದ ಮಠಾಧೀಶರಾದ ಶ್ರೀ ನಿರ್ಮಲನಾಥನಂದ ಸ್ವಾಮೀಜಿಗಳ ಹೇಳಿಕೆಗೆ ಕೇಳಲಾದ ಪ್ರಶ್ನೆಗೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಅಥವಾ ಮಾಡಬಾರದು ಎಂಬ ನಿರ್ಧಾರವನ್ನು ನಮ್ಮ ಪಕ್ಷದ ನಾಯಕರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.


