ಮಂಗಳೂರು: ಒಂದೆಡೆ ಸರದಿ ಬ್ರೇಕ್ ಫಾಸ್ಟ್ ಸಭೆಗಳನ್ನು ನಡೆಸುವ ಮೂಲಕ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿದೆ ಎಂಬ ಸಂದೇಶ ರವಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯತ್ನಿಸಿದ್ದರೂ, ಶಾಸಕರು ಮತ್ತು ಕಾಯಕರ್ತರ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಹಾಗೂ ಬದಲಾವಣೆ ಆಗಬಾರದು ಎಂಬ ಕೂಗು ನಿಂತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಮಂಗಳೂರು.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಡಿಕೆ ಡಿಕೆ ಎಂದು ಜೈಕಾರ ಹಾಕಿದರೆ, ಸಮಾರಂಭದ ವೇಳೆ ಸಿಎಂ ಸಿದ್ದರಾಮಯ್ಯ ಐದೂ ವರ್ಷಗಳ ಕಾಲ ಸಿಎಂ ಆಗಿರಬೇಕೆಂದು ಅಭಿಮಾನಿಗಳು ಜೈಕಾರ ಹಾಕಿದ್ದಾರೆ.
ಈನಡುವೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ದೆಹಲಿಗೆ ಹೋದ್ರೆ ತಪ್ಪೇನು ? ಹೋಗ್ಲಿ ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಕೆ.ಸಿ. ವೇಣುಗೋಪಾಲ್ ಜತೆ ಸಿಎಂ ಮಾತುಕತೆ ನಡೆಸಿದ್ದಾರೆ ಎಂಬ ಪ್ರಶ್ನೆಗೆ ನಡೆಸಲಿ ಬಿಡಿ, ತಪ್ಪೇನು ? ಅಷ್ಟಕ್ಕೂ ಸಭೆ ಮಾಡಿ ಚರ್ಚಿಸಲು ಏನಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
‘ಭಿನ್ನಾಭಿಪ್ರಾಯ ಬಗೆಹರಿದಿದೆ’
ಬೆಂಗಳೂರು: ಇತ್ತೀಚಿನ ರಾಜಕೀಯ ಭಿನ್ನಾಭಿಪ್ರಾಯಗಳ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಬುಧವಾರ ಹೇಳಿದ್ದು, ಪಕ್ಷದೊಳಗಿನ ಯಾವುದೇ ಸಣ್ಣ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ‘ನಾನು ಅನಗತ್ಯವಾಗಿ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಈಗ ಎಲ್ಲವೂ ಮುಗಿದಿದೆ. ಯಾವುದೇ ಸಣ್ಣ ವ್ಯತ್ಯಾಸವಿದ್ದರೂ, ಸಮಸ್ಯೆ ಇದ್ದರೂ, ಅದನ್ನು ಪರಿಹರಿಸಲಾಗಿದೆ… ನಾನು ರಾಜಕೀಯೇತರ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಹೋಗುತ್ತಿದ್ದೇನೆ’ ಎಂದು ಹೇಳಿದರು.
‘ರಾಜಕೀಯ ಶಾಶ್ವತವಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಎಲ್ಲರಿಗೂ ಈಗಾಗಲೇ ತಿಳಿದಿರುವ ವಿಷಯ’ ಎಂದು ಹೇಳಿದರು.
ಆದರೆ, ನಿನ್ನೆ ಮುಖ್ಯಮಂತ್ರಿಗಳು ಡಿಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಮಾಡಿದ ಬಳಿಕ ಶಾಸಕ ಗೋಪಾಲಸ್ವಾಮಿ ಅವರ ಬಳಿ ಅನೌಪಚಾರಿಕವಾಗಿ ಹೇಳಿದ ಮಾತು ʻರಾಜಕೀಯ ಯಾರಿಗೂ ಶಾಶ್ವತವಲ್ಲʼ ಎಂದು ಹೇಳಿರುವುದು ವ್ಯಾಪಕ ವಿಶ್ಲೇಷಣೆಗೆ ಕಾರಣವಾಗಿದೆ. ಅದೊಂದು ಸಹಜವಾಗಿ ಹೇಳಿರಬಹುದಾದ ಮಾತು. ಇದಕ್ಕೆ ಅರ್ಥ ಕೊಡಬೇಕಾಗಿಲ್ಲ ಎಂದು ಡಿಕೆಶಿ ಸಹೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಸಿ.ಎಂ. ಮಾತುಗಳನ್ನು ಸಮರ್ಥಿಸಿಕೊಂಡಿರುವ ಅವರು, ‘ಯಾರಿಗೂ ಅಧಿಕಾರ ಶಾಶ್ವತವಲ್ಲ’ ಎಂದು ಪುನರುಚ್ಚರಿಸಿದರು.
ಅಧಿಕಾರ ತ್ಯಾಗದ ಬಗ್ಗೆ ಸ್ಪಷ್ಟನೆ :
ಮುಖ್ಯಮಂತ್ರಿಗಳು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದಲ್ಲ, ಆದರೆ ‘ಮೂವತ್ತು ತಿಂಗಳ ನಂತರವಾದರೂ ಬಿಡಬಹುದು, ಅದಕ್ಕೂ ಮೊದಲೇ ಬಿಡಬಹುದು. ಬಿಡುವುದಂತೂ ಪಕ್ಕಾ. ಯಾವಾಗಲಾದ್ರೂ ಬಿಡಲೇಬೇಕು’ ಎಂದು ಹೇಳಿದರು.
ದಲಿತ ಸಿಎಂ ಆಗಬೇಕು:
ರಾಜ್ಯ ಕಾಂಗ್ರೆಸ್ನಲ್ಲಿ ಎಬ್ಬಿರುವ ನಾಯಕತ್ವ ಬದಲಾವಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮತ್ತೊಮ್ಮೆ ಧ್ವನಿ ಎತ್ತಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಮುಂದಿನ ಅವದಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಬೇಕು ಎನ್ನುವುದೇ ನಮ್ಮ ಒತ್ತಾಯ. ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ದಲಿತರಿಗೆ ಮುಖ್ಯಮಂತ್ರಿ ಮಾಡಬೇಕೆಂದು ನಾವು ನಾಯಕರಿಗೆ ಮನವರಿಕೆ ಮಾಡಿಕೊಡುತ್ತೇವೆ. ಆಮೂಲಕ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಎಂಬುವುದೇ ನಮ್ಮ ಆಶಯ ಎಂದರು.


