Online News in ಕನ್ನಡ

ರೈತರ ಪರಿಹಾರ ನಿಧಿ ಬಿಡುಗಡೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನಿಧಿಯನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಮೈಸೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕಾಡಾ ಕಚೇರಿ ಮುಂಭಾಗ ಧರಣಿ ನಡಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ.ಗಳ ಪ್ರೋತ್ಸಾಹಧನ ಸುಮಾರು 620 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿಲ್ಲ. ಪ್ರತಿ ಟನ್ ಕಬ್ಬಿಗೆ ರೂ. 3300 ರೂ.ಗಳನ್ನು ನಿಗದಿ ಪಡಿಸಿರುವುದನ್ನು ಸ್ವಾಗತಿಸಿದರೂ, ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸಮಾನವಾಗಿ ಜಾರಿ ಮಾಡಿಲ್ಲ. ಕಳೆದ 2 ವರ್ಷಗಳಿಂದ ಪ್ರಾಣಿ ಮತ್ತು ಮಾನವ ಸಂಘರ್ಷದಿಂದಾಗಿ ಅನೇಕ ಸಾವು ನೋವು ಮತ್ತು ಬೆಳೆ ಹಾನಿ ಸಂಭವಿಸಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಪ್ರವಾಹದ ಸಮೀಕ್ಷೆಗಳನ್ನು ನಡೆಸಿಲ್ಲ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಶುಂಠಿಗೆ ತಗುಲಿರುವ ಬೆಂಕಿ ರೋಗ. ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಬೇಳೆ, ಕಡಲೆ ಧಾನ್ಯಗಳಿಗೆ ತಗುಲಿರುವ ಸೊರಗು ರೋಗಗಳ ನಿಯಂತ್ರಣಕ್ಕೆ ಸರಕಾರ ಸಮರ್ಪಕ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಂ. ಸುಬ್ಬಣ್ಣ, ಮೈಸೂರು ನಗರ ಅಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಹರ್ಷವರ್ಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೈ.ಪು. ರಾಜೇಶ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಬಿ.ಎಂ.ರಘು, ಪರಿಕ್ಷೀತ್ ರಾಜೇ ಅರಸ್, ರುದ್ರಮೂರ್ತಿ, ರಾಮಚಂದ್ರ, ದೇವರಾಜ್, ಶ್ರೀನಿವಾಸ ಮಿರ್ಲೆ ಮೊದಲಾದವರು ಭಾಗವಹಿಸಿದ್ದರು.

Call Now Button