Online News in ಕನ್ನಡ

ಮೈಸೂರಿನಲ್ಲಿ ಯೂನಿಟಿ ಮಾಲ್‌ ನಿರ್ಮಾಣಕ್ಕೆ ಹೈ-ಕೋರ್ಟ್‌ ತಡೆ

ಅಂದು ಸಂಸದ ಯದುವೀರ್‌ ಗುದ್ದಲಿ ಪೂಜೆ, ಇಂದು ತಾಯಿ ಪ್ರಮೋದಾ ದೇವಿಯಿಂದ ತಡೆ

ಮೈಸೂರು: ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಯೂನಿಟಿ ಮಾಲ್‌ ನಿರ್ಮಾಣಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಗುದ್ದಲಿ ಪೂಜೆ ನೆರವೇಸಿದ ಕೆಲವೇ ದಿನಗಳಲ್ಲಿ ಯೂನಿಟಿ ಹಾಲ್‌ ನಿರ್ಮಾಣಕ್ಕೆ ತಾಯಿ ಪ್ರಮೋದ ದೇವಿ ಒಡೆಯರ್‌ ಅವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ದೇಶೀಯ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಕೇಂದ್ರ ಸರಕಾರದ ಮಹತ್ವದ ಯೋಜನೆಯಡಿ ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದ ಸರ್ವೇ ನಂ.1ರ 6.5 ಎಕರೆ ಪ್ರದೇಶದಲ್ಲಿ ‘ಯೂನಿಟಿ ಮಾಲ್‘ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಕಳೆದ ಜುಲೈ ೨೭ರಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಗುದ್ದಲಿ ಪೂಜೆ ನೆರವೇರಿಸಿದ್ದರು. ಇದರ ವಿರುದ್ಧ ಇದೀಗ ಇವರ ತಾಯಿ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಕೋರ್ಟ್‌ ಮೆಟ್ಟಿಲೇರಿದ್ದು, ಸದರಿ ಸರ್ವೆ ಜಾಗದಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡದೆ ಯಥಾಸ್ಥಿತಿ ಮುಂದುವರೆಸಬೇಕೆಂದು ಕೋರಿದ್ದರು. ರಾಜ್ಯ ಹೈಕೋರ್ಟ್‌ ಯಥಾಸ್ಥಿತಿ ಕಾಪಾಡಲು ಆದೇಶ ನೀಡಿದೆ.


ಕೇಂದ್ರ ಸರ್ಕಾರದ ಮೇಕ್-ಇನ್-ಇಂಡಿಯಾ ಬಲಪಡಿಸಲು ಉತ್ತಮ ವೇದಿಕೆಯಾಗಿದ ಯೂನಿಟಿ ಮಾಲ್, ಪಿಪಿಪಿ ಮಾದರಿಯಲ್ಲಿ ಒಟ್ಟು 193 ಕೋಟಿ ರೂ. ವೆಚ್ಚದಲ್ಲಿ ಯೂನಿಟಿ ಮಾಲ್ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸಲಾಗಿತ್ತು. ದೇಶದ ವಿವಿಧ ರಾಜ್ಯಗಳ ಒಟ್ಟು 36 ವಾಣಿಜ್ಯ ಮಳಿಗೆಗಳನ್ನು ಪ್ರಾರಂಭಿಸಿಲು ಉದ್ದೇಶಿಸಲಾಗಿತ್ತು.
ಜೊತೆಗೆ ಅತಿಥೇಯ ರಾಜ್ಯ ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದು ಮಳಿಗೆಯನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿತ್ತು. ಆ ಮೂಲಕ ಆಯಾ ರಾಜ್ಯಗಳ ದೇಸಿಯ ಕರಕುಶಲ ಉತ್ಪನ್ನಗಳ ಮಾರಾಟಕ್ಕೆ ಹಾಗೂ ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿತ್ತು.
ಇದೀಗ ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿರುವ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಈ ಮಹತ್ವದ ಯೋಜನೆಗೆ ಅಡ್ಡಿಯಾದರೇ ? ಎಂಬ ಪ್ರಶ್ನೆ ಮೂಡಿದೆ.

Call Now Button