Online News in ಕನ್ನಡ

ಮೈಸೂರಿನ ಹೊರವಲಯದ ಬಡಾವಣೆಗಳಿಗೆ ಶೀಘ್ರ ಕುಡಿಯುವ ನೀರು ಸರಬರಾಜು

ಮೈಸೂರು: ನಗರ ಮತ್ತು ಹೊರವಲಯದ ಬಡಾವಣೆಗಳು, ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ದಿನದ ೨೪ ಗಂಟೆಗಳ ಕಾಲ ಕುಡಿಯುವ ನೀರು ಒದಗಿಸುವ ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಆರು ತಿಂಗಳಲ್ಲಿ ಮುಗಿಯಲಿದ್ದು, ಅಲ್ಲಿಯವರೆಗೆ ಕಾವೇರಿ,ಕಬಿನಿ ಜಲಮೂಲದಿಂದ ಒದಗಿಸುತ್ತಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರಪಾಲಿಕೆ ವಲಯ ಕಚೇರಿ ಮೂರರಲ್ಲಿ ಶನಿವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಪಾಲಿಕೆ ವಲಯ ಕಚೇರಿ,ಪಟ್ಟಣ ಪಂಚಾಯಿತಿ,ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಮುಂದಿನ ಆರು ತಿಂಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾಗಿರುವ ಕಾರಣ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸೀಫ್ ಇಕ್ಬಾಲ್ ಖಲೀಲ್ ಮಾತನಾಡಿ, ೨೦೧೮ರಲ್ಲಿ ಹಳೇ ಉಂಡುವಾಡಿ ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಮೂರು ವರ್ಷಗಳಿಂದ ಕಾಮಗಾರಿ ಆರಂಭವಾಗಿ ಪ್ರಗತಿಯಲ್ಲಿದೆ. ೩೧ ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ ೨೨ ಪೂರ್ಣವಾಗಿ,೭ಟ್ಯಾಂಕ್ ಏಪ್ರಿಲ್ ತಿಂಗಳಲ್ಲಿ ಮುಗಿಯಲಿದೆ.ಉಳಿದ ಎರಡು ಜೂನ್ ತಿಂಗಳಲ್ಲಿ ಮುಗಿಯಲಿದೆ.ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು.

ಮುಂದಿನ ಜೂನ್ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾಗಿರುವುದರಿಂದ ಸಮಸ್ಯೆಗಳ ಪಟ್ಟಿ ಮಾಡಬೇಕು. ಪರಸ್ಪರ ಸಮನ್ವಯತೆಯಿಂದ ನೀರು ಕೊಡಬೇಕು. ಪ್ರತಿನಿತ್ಯ ಜನರು ಬಂದು ಸಮಸ್ಯೆ ಹೇಳುತ್ತಾರೆ.ಅಧಿಕಾರಿಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡು ದಿನನಿತ್ಯ ನಿವಾಸಿಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು. ಯುಜಿಡಿ ಸಮಸ್ಯೆ ಬರದಂತೆ ನಿತ್ಯ ಅಧಿಕಾರಿಗಳು ಬಡಾವಣೆಗಳಿಗೆ ಭೇಟಿ ನೀಡಿವೀಕ್ಷಿಸಿದರೆ ಗೊತ್ತಾಗುತ್ತದೆ.

-ಜಿ.ಟಿ.ದೇವೇಗೌಡ, ಶಾಸಕರು.

ಬೆಳಗೊಳ ಒಂದನೇ ಹಂತದಲ್ಲಿ ೨,೨೭ ಎಂಎಲ್‌ಡಿ, ಎರಡನೇ ಹಂತದ ೧೩.೬೨,ಮೂರನೇ ಹಂತದಲ್ಲಿ ೩೬.೩೨ ಎಂಎಲ್‌ಡಿ,ಹೊಂಗಳ್ಳಿ ಎರಡನೇ ಹಂತ ೫೪, ಮೂರನೇ ಹಂತದ ೪೮ಎಂಎಲ್‌ಡಿ, ಮೇಳಾಪುರ ೧ನೇ ಹಂತ ೫೦ಎಂಎಲ್‌ಡಿ, ಕಬಿನಿ ಜಲಾಶಯದಿಂದ ೬೦ಎಂಎಲ್‌ಡಿ ನೀರು ಡ್ರಾ ಮಾಡಲಾಗುತ್ತಿದೆ. ಹಳೇ ಉಂಡುವಾಡಿ ಯೋಜನೆ ಪೂರ್ಣವಾಗುವ ತನಕ ಮೇಳಾಪುರ,ಹೊಂಗಳ್ಳಿ ಮೂಲದಿಂದ ರಮ್ಮನಹಳ್ಳಿ ಭಾಗಕ್ಕೆ, ಕಬಿನಿ ಮೂಲದಿಂದ ಶ್ರೀರಾಂಪುರ,ಬೋಗಾದಿ ಭಾಗಕ್ಕೆ ಹರಿಸಲಾಗುತ್ತಿದೆ.
ಕಬಿನಿ ಎರಡನೇ ಹಂತದ ೬೦ಎಂಎಲ್‌ಡಿ ನೀರಿನಲ್ಲಿ ವಿಜಯನಗರ ನಾಲ್ಕನೇ ಹಂತ, ಎಸ್‌ಬಿಎಂ ಲೇಔಟ್, ರೂಪಾನಗರ ಇನ್ನಿತರ ಪ್ರದೇಶಗಳಿಗೆ ಹರಿಸಲಾಗುತ್ತದೆ ಎಂದು ಹೇಳಿದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಅವರು ಹಾಲಿ ಬಡಾವಣೆಗಳು,ಗ್ರಾಮಗಳಿಗೆ ನೀರು ಕೊಡುವ ಜತೆಗೆ ಖಾಸಗಿ ಬಡಾವಣೆಗಳಿಗೆ ನೀರು ಕೊಡಬೇಕು. ಬಡಾವಣೆಗಳಲ್ಲಿ ನಿರ್ಮಿಸಿರುವ ಓವರ್‌ಹೆಡ್ ಟ್ಯಾಂಕ್‌ಗೆ ಸಂಪರ್ಕ ಕೊಡಬೇಕು. ಎಲ್ಲೆಲ್ಲಿ ಪೈಪ್‌ಲೈನ್ ಅಗತ್ಯವಿದೆ, ಯಾವ್ಯಾವ ಕಡೆಗಳಲ್ಲಿ ಸಂಪರ್ಕ ಕೊಡಬೇಕು, ಎಲ್ಲಿ ಮಿಸ್ಸಿಂಗ್ ಲಿಂಕ್ ಇದೆ ಎನ್ನುವುದನ್ನು ಪರಿಶೀಲಿಸಬೇಕು. ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು,ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ವರದಿ ತಯಾರಿಸಬೇಕು. ಖಾಸಗಿ ಬಡಾವಣೆಗಳಿಗೆ ನೀರು ಕೊಡಲು ಪೈಪ್‌ಲೈನ್ ಅಗತ್ಯವಿದ್ದರೆ ತಕ್ಷಣವೇ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಿದರು.
ರಮ್ಮನಹಳ್ಳಿ ಪಪಂ ವ್ಯಾಪ್ತಿಯಲ್ಲಿ ಜಂಟಿ ಸರ್ವೆ ನಡೆಸಿ ಮ್ಯಾಪ್ ಮಾಡಿ ಎಲ್ಲೆಲ್ಲಿ ಏನಾಗಬೇಕೆಂದು ಗುರುತಿಸಲಾಗಿದೆ. ವಸಂತನಗರ,ಪೊಲೀಸ್ ಬಡಾವಣೆ,ಸಾತಗಳ್ಳಿ ಬಡಾವಣೆಗಳಿಗೆ ನೀರು ಹೋಗಲು ಇರುವ ಸಮಸ್ಯೆ ನಿವಾರಿಸುವ ಕೆಲಸ ನಡೆದಿದೆ.ಅದೇ ರೀತಿ ಬೇರೆ ಪಂಚಾಯಿತಿಗಳಲ್ಲೂ ಸರ್ವೆ ಮಾಡಿಸಿ ಮುಂದಿನ ಕ್ರಮಕೈಗೊಳ್ಳಬೇಕು ಎಂದರು.

 

Call Now Button