ಮೈಸೂರು (ಕೆ.ಆರ್.ನಗರ ) ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಕ್ಯಾಂಟರ್ ಮತ್ತು ಚಾಲಕನನ್ನು ವಶಕ್ಕೆ ಪಡೆದಿರುವ ಪಟ್ಟಣದ ಪೊಲೀಸರು ಈ ಸಂಬಂದ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದ ಹಾಸನ ರಸ್ತೆ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕ್ಯಾಂಟರ್ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಮೈಸೂರು ದಕ್ಷಿಣ ವಲಯ ಡಿವೈಎಸ್ಪಿ ಟಿ.ಬಿ..ರಾಜಣ್ಣ ನೇತೃತ್ವದಲ್ಲಿ ಪೊಲೀಸರು ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದ ಬಳಿ ದಾಳಿ ನಡೆಸಿದರು. ಈ ವೇಳೆ ಲಾರಿ ಸಮೇತ 98 ಮೂಟೆಯ 46 ಕ್ವಿಂಟಾಲ್ ಪಡಿತರ ಅಕ್ಕಿಯೊಂದಿಗೆ ಚಾಲಕ ಮಹಮ್ಮದ್ ಸಜ್ಜದ್ನನ್ನು ವಶಕ್ಕೆ ಪಡೆಯಲಾಯಿತು.

ಕ್ಯಾಂಟರ್ ನಲ್ಲಿ ಸಾಗಣೆ ಮಾಡುತ್ತಿದ್ದ ಅಕ್ಕಿಯು ನೇರ ಗೋಡೌನ್ನಿಂದ ತೆಗೆದುಕೊಂಡು ಯಾವುದೇ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಆಧರಿಸಿ ಲಾರಿಯನ್ನು ತಡೆದು ವರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಮುದ್ರೆಯ ಪಡಿತರ ಅಕ್ಕಿಯ ಚೀಲದ ಹೊಲಿಗೆಯನ್ನು ಬಿಚ್ಚದೆ ಚೀಲಸಮೇತ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಸಂಬಂಧಿಸಿದಂತೆ ಆಹಾರ ಇಲಾಖೆ ನಿರೀಕ್ಷಕರಾದ ಕುಮಾರ್ ಮತ್ತು ಸುರೇಶ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶಿವ ಪ್ರಕಾಶ್ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ವಶಕ್ಕೆ ಪಡೆಯಲಾಗಿರುವ ಪಡಿತರ ಅಕ್ಕಿ ಆಹಾರ ನಿಗಮದ ಗೋಡೌನ್ನಿಂದ ಬಂದಿರುವ ಅಕ್ಕಿಯಾದರೂ ಅದು ಪಡಿತರ, ಬಿಸಿಯೂಟ, ಹಾಸ್ಟೆಲ್ ಅಥವಾ ಖಾಸಗಿಯವರು ಖರೀದಿಸುವ ಅಕ್ಕಿಯೇ ಎಂಬುದು ಇನ್ನೂ ಖಚಿತವಾಗಿಲ್ಲ. ತನಿಖೆ ನಡೆಸಿದ ನಂತರ ಅಕ್ಕಿ ಯಾವ ಗೋಡೌನ್ನಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸುರೇಶ್, ಆಹಾರ ನಿರೀಕ್ಷಕರು, ಆಹಾರ ಇಲಾಖೆ
ಇದುವರೆವಿಗೆ ಮೂರನೇ ಘಟನೆ : ಪಟ್ಟಣದಲ್ಲಿ ಈ ಪ್ರಕರಣ ಸೇರಿದಂತೆ ಮೂರು ಬಾರಿ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಹಾಗೂ ಅಕ್ರಮವಾಗಿ ಶೇಖರಣೆ ಮಾಡಿದ್ದಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಕೆಲವು ತಿಂಗಳ ಹಿಂದೆಯಷ್ಟೆ ಕ್ಯಾಂಟರ್ ಅಕ್ರಮ ಸಾಗಣೆ ಮಾಡುತ್ತಿದ್ದ 9.7 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿತ್ತು. ಪಟ್ಟಣದ ಖಾಸಗಿ ಗೋಡೌನ್ ಮೇಲೆ ಮತ್ತೆ ದಾಳಿ ನಡೆಸಿ 14 ಕ್ವಿಂಟಾಲ್ ಅಕ್ಕಿ, ಐದೂವರೆ ಕ್ವಿಂಟಾಲ್ ರಾಗಿ ಹಾಗೂ ನಾಲ್ಕೂವರೆ ಕ್ವಿಂಟಾಲ್ ಗೋಧಿಯನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಮತ್ತೊಮ್ಮೆ ಪಡಿತರ ಅಕ್ಕಿ ಕಳ್ಳಸಾಗಣೆ ನಡೆದಿದೆ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.


