75 ಮಹಿಳೆಯರ ಬದುಕಿಗೆ ಎಲೆಕ್ನಿಕ್ ಆಟೋಗಳ ಆಸರೆ
ಮೈಸೂರು: ಜಾಗತಿಕ ಆರೋಗ್ಯ ಮತ್ತು ಕ್ಷೇಮ ಸಂಸ್ಥೆಯಾದ ಹರ್ಬಲೈಫ್, ಕಳೆದ ಮೂರು ದಶಕಗಳಿಂದ ಸಮಾಜದ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸುತಿರುವ ಬೆಂಗಳೂರಿನ ‘ಶಿಶು ಮಂದಿರ’ ಹಾಗೂ ಮೈಸೂರಿನ ‘ನಾವಿಯೋ ಟ್ರಸ್ಟ್’ ಸಹಯೋಗದೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ‘ಇಕೋ-ವೀಲ್ಸ್ ‘ ಮಹಿಳಾ ಸಬಲೀಕರಣ ಯೋಜನೆಗೆ ಚಾಲನೆ ನೀಡಿತು.
ಈ ಮಹತ್ವದ ಯೋಜನೆಯಡಿ ಮೈಸೂರಿನ 75 ಮಹಿಳೆಯರಿಗೆ ಎಲೆಕ್ನಿಕ್ ಆಟೋಗಳನ್ನು ವಿತರಿಸುವ ಮೂಲಕ ಅವರಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಲಾಯಿತು. ನಗರದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಜೊತೆಗೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.
ಇದೇ ಸಂದರ್ಭದಲ್ಲಿ ಮಹಿಳೆಯರನ್ನು ಹಸಿರು ಸಾರಿಗೆಯ ರಾಯಭಾರಿಗಳನ್ನಾಗಿ ಬಿಂಬಿಸುವ ವರ್ಷಪೂರ್ತಿ ನಡೆಯಲಿರುವ “ಹಸಿರು ಮೈಸೂರು, ಸ್ವಚ್ಛ ಮೈಸೂರು” ಅಭಿಯಾನಕ್ಕೆ ಕೆ.ಆರ್.ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ಹರ್ಬಲೈಫ್ ಇಂಡಿಯಾ ಉಪಾಧ್ಯಕ್ಷ ಉದಯ್ ಪ್ರಕಾಶ್ ಹಾಜರಿದ್ದರು.

“ಮಹಿಳೆಯರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಮತ್ತು ನಗರದ ಹಸಿರು ನಾರಿಗೆ ವ್ಯವಸ್ಥೆಗೆ ಕೊಡುಗೆ ನೀಡಲು ಇಕೋ-ವೀಲ್ಸ್ ಯೋಜನೆ ಉತ್ತಮ ವೇದಿಕೆ ಸಮಾನತೆ ಮತ್ತು ಸಾಮಾಜಿಕ ಪ್ರಗತಿ ಪ್ರತಿಪಾದಿಸುವ ಇಂತಹ ಕಾರ್ಯಗಳಿಗೆ ಮೈಸೂರು ಸದಾ ಬೆಂಬಲ ನೀಡುತ್ತದೆ.” – ಟಿ.ಎಸ್.ಶ್ರೀವತ್ಸ, ಶಾಸಕ, ಕೆ.ಆರ್.ಕ್ಷೇತ್ರ
ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ
ಫಲಾನುಭವಿಗಳ ಬದುಕಿನಲ್ಲಿ ಆಶಾಕಿರಣವಾಗಿದ್ದ ‘ಇಕೋ-ವೀಲ್ಸ್’ ಯೋಜನೆಯನ್ನು 2024ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರಂಭಿಸಲಾಗಿತ್ತು. ಅಲ್ಲಿ 115ಕ್ಕೂ ಹೆಚ್ಚು ಹಿಂದುಳಿದ ವರ್ಗದ ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ (LGBTQ+) ಇ-ಆಟೋ, ಕೌಶಲ್ಯ ತರಬೇತಿ ಮತ್ತು ಲೈಸೆನ್ಸ್ ಪಡೆಯಲು ನೆರವು ನೀಡಲಾಗಿತ್ತು. ಇದರ ಪರಿಣಾಮವಾಗಿ, ಫಲಾನುಭವಿಗಳ ಮಾಸಿಕ ಆದಾಯ 10,000 ರೂ.ನಿಂದ 30,000 ರೂ.ಗಿಂತಲೂ ಹೆಚ್ಚಾಗಿದೆ. ಬೆಂಗಳೂರಿನ ಈ ಯಶಸ್ಸಿನಿಂದ ಪ್ರೇರಿತಗೊಂಡು, ಈಗ ಮೈಸೂರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ಮೈಸೂರಿನಲ್ಲಿ ಒಂಟಿ ಪೋಷಕರು, ವಿಧವೆಯರು, ದೌರ್ಜನ್ಯ ಸಂತ್ರಸ್ತರು ಮತ್ತು ತೃತೀಯ ಲಿಂಗಿಗಳು ಸೇರಿದಂತೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಇ-ಆಟೋಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ವ್ಯವಸ್ಥಿತ ವಾಹನ ಚಾಲನಾ ತರಬೇತಿ, ಲೈಸೆನ್ಸ್ ಮಾಡಿಸಿಕೊಡುವುದು, ವಾಹನ ನಿರ್ವಹಣೆ ಮತ್ತು ಮೂಲಭೂತ ಉದ್ಯಮಶೀಲತಾ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತಿದೆ.


