೧೧ ಅಂತರಜಾತಿ ವಿವಾಹಕ್ಕೆ ಸಾಕ್ಷಿಯಾದ ಸರ್ವ ಧರ್ಮಗಳ ಗುರು ಗಣ್ಯರು !
ನಂಜನಗೂಡು: ಮೈಸೂರು ಭಾಗದ ಆಧ್ಯಾತ್ಮಿಕ ಶಕ್ತಿ ಕೇಂದ್ರ ಸುತ್ತೂರಲ್ಲಿ ಜಾತ್ರೆ ಸಂಭ್ರಮ ಮೇಳೈಸಿದೆ. ಸುತ್ತೂರು ಜಾತ್ರಾ ಮಹೋತ್ಸವ ಸಂಭ್ರಮ ಕಳೆಗಟ್ಟಿದ್ದು, ಜಾತ್ರಾ ಮಹೋತ್ಸವದ 2ನೇ ದಿನ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿದೆ. ಬರೋಬ್ಬರಿ 135 ಜೋಡಿಗಳು ವೈವಾಹಿಕ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ. ವಿವಾಹ ಮಹೋತ್ಸವ ಅದ್ದೂರಿಯಾಗಿ ಜರುಗಿದೆ.

135 ಜೋಡಿಗಳು ವೈವಾಹಿಕ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ವಿವಿಧ ಮಠಾಧಿಪತಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ ನಡೆದಿದೆ. 135 ಜೋಡಿಗಳ ಪೈಕಿ 4 ವೀರಶೈವ ಲಿಂಗಾಯತ, 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 21 ಹಿಂದುಳಿದ ವರ್ಗ, 11 ಅಂತರಜಾತಿ ಜೋಡಿಗಳು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗುವ ಮೂಲಕ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ 5 ಜೋಡಿಗಳು, 3 ವಿಶೇಷ ಚೇತನ ಜೋಡಿಗಳು ಹಾಗು 3 ಜೋಡಿ ಮರು ಮದುವೆಯಾದದ್ದು, ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿಶೇಷ ಗಮನವನ್ನ ಸೆಳೆದಿದೆ. 2000 ರಿಂದ 2025ರವರಗೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜರುಗಿರುವ ಸಾಮೂಹಿಕ ವಿವಾಹದಲ್ಲಿ 3346 ಜೋಡಿಗಳು ಸತಿಪತಿಗಳಾಗಿದ್ದು, ಪ್ರತಿ ತಿಂಗಳು ನಡೆಯುವ ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 2009 ರಿಂದ 2025 ರವರೆಗೆ 540 ಜೋಡಿಗಳು ಸತಿಪತಿಗಳಾಗಿದ್ದಾರೆ. ಒಟ್ಟಾರೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 3886 ಜೋಡಿಗಳು ವಿವಾಹವಾಗಿದ್ದಾರೆ.

ನವಜೋಡಿ ಸಂಭ್ರಮ
ವಿವಾಹ ಸಂದರ್ಭದಲ್ಲಿ ವರನಿಗೆ ಪಂಚೆ, ಶರ್ಟು, ವಲ್ಲಿ ಹಾಗೂ ವಧುವಿಗೆ ಸೀರೆ, ರವಿಕೆ, ಮಾಂಗಲ್ಯ, ಕಾಲುಂಗುರಗಳನ್ನು ನೀಡಲಾಯಿತು. ಕಪಿಲಾ ನದಿ ತೀರದ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿ ದಿನದಂದು ಆರು ದಿನಗಳ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಪ್ರಾರಂಭವಾಗುತ್ತದೆ. ಮರು ದಿನ ತ್ರಯೋದಶಿಯಂದು ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯುವುದು ವಾಡಿಕೆಯಾಗಿದೆ. ಎಲ್ಲ ವಧು-ವರರು ಹೊಸ ಸೀರೆ, ರವಿಕೆ, ಹೊಸ ವಸ್ತ್ರಗಳನ್ನು ತೊಟ್ಟು, ಬಾಸಿಂಗ ಕಟ್ಟಿಕೊಂಡು ಸುಂದರವಾಗಿ ಅಲಂಕರಿಸಿ ಕೊಂಡು ಕುಳಿತಿದ್ದರು. ಶುಭ ಮುಹೂರ್ತ ಆರಂಭವಾಗುತ್ತಿದ್ದಂತೆ ಪೂಜ್ಯರು ಮತ್ತು ಅತಿ ಗಣ್ಯರು ಮಾಂಗಲ್ಯ ವಿತರಿಸಿದರು.

ಬಳಿಕ ಮಂಗಳವಾದ್ಯ ಮೊಳಗುತ್ತಿದ್ದಂತೆ ವರನಿಂದ ವಧುವಿಗೆ ತಾಳಿ ಕಟ್ಟಿದರು. ಒಟ್ಟಾರೆ ಜಾತ್ರೆಯಲ್ಲಿ ನವ ಜೋಡಿ ಹೊಸ ಬದುಕು ಆರಂಭಿಸಿದ್ದು, ನೆರೆದ ಜನರು ಶುಭ ಹಾರೈಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳೊಂದಿಗೆ, ಸಚಿವ ರಾಮಲಿಂಗಾರೆಡ್ಡಿ, ಶಾಸಕ ಆರ್.ವಿ ದೇಶಪಾಂಡೆ, ಸಚಿವ ಮಂಕಾಳ ಎಸ್ ವೈದ್ಯ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕರಾದ ನಂಜೇಗೌಡ, ಹಂಪನಗೌಡ, ಬಿಷಪ್ ರೆ.ಫಾ ಫ್ರಾನ್ಸಿಸ್ ಸೆರಾವ್ ಎಸ್.ಜೆ, ರೆ.ಫಾ ಡಾ.ಗೇಬ್ರಿಯಲ್ ಮಾರ್ ಗ್ರೆಗೋರಿಯಸ್ ಇದ್ದರು.

ಮೊದಲ ದಿನವೇ ಲಕ್ಷಾಂತರ ಮಂದಿ ಭೇಟಿ
ಹಳೇ ಮೈಸೂರು ಪ್ರಾಂತ್ಯದ ಜನಾಕರ್ಷಕ ಸುತ್ತೂರು ಜಾತ್ರಾ ಮಹೋತ್ಸವ ಗುರುವಾರ ಅನಾವರಣಗೊಂಡಿತು. ಆರು ದಿನಗಳ ವೈಭವಪೂರ್ಣ ಜಾತ್ರಾ ಮಹೋತ್ಸವದ ಮೊದಲ ದಿನವೇ ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದರು. ಜಾತ್ರೆಯಲ್ಲಿ 5 ದಾಸೋಹ ಪ್ರಸಾದ ವಿತರಣಾ ಕೇಂದ್ರಗಳನ್ನು ತೆರೆದಿದ್ದು, ಗದ್ದುಗೆ ಸಮೀಪದಲ್ಲಿರುವ ಮಹಾ ದಾಸೋಹ ಪ್ರಸಾದ ವಿತರಣಾ ಕೇಂದ್ರದಲ್ಲಿ ಮಹಿಳೆಯರು , ಪುರುಷರಿಗೆ ಹಾಗೂ ಸ್ವಯಂ ಸೇವಕರಿಗೆ ಪ್ರತ್ಯೇಕವಾಗಿ ಪ್ರಸಾದ ವಿತರಿಸಲಾಯಿತು.


