ಬೀದರ್ : ಹಿರಿಯ ರಾಜಕಾತಣಿ, ಲೋಕ ನಾಯಕ, ಶತಾಯುಷಿ ಭೀಮಣ್ಣ ಖಂಡ್ರೆ ಅವರು ವಯೋಸಹಜ ಬಳಲಿಕೆಯಿಂದ ನಿಧನರಾಗಿದ್ದಾರೆ. ಇವರಿಗೆ 102 ವರ್ಷ ವಯಸ್ಸಾಗಿತು. ಬೀದರಿನ ಸ್ವಗ್ರಾಮದಲ್ಲಿ ವಿಧಿವಶರಾಗಿದ್ದಾರೆ.
ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೀರಶೈವ ಲಿಂಗಾಯತ ಸಮಾಜದ ಹಿರಿಯಣ್ಣ ಭೀಮಣ್ಣ ಖಂಡ್ರೆ, ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 12 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ರಾಜಕಾರಣದಲ್ಲೂ ವಿಶೇಷ ಛಾಪು ಮೂಡಿಸಿದ್ದರು.
1923 ಜನವರಿ 8ರಂದು ಗೋರ್ಟಾ ಗ್ರಾಮದಲ್ಲಿ ಜನಿಸಿದ ಭೀಮಣ್ಣ ಖಂಡ್ರೆ, 1962, 1967, 1978 ಮತ್ತು 1988ರಲ್ಲಿ ಶಾಸಜರಾಗಿ, 1994 ಮತ್ತು 2000ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದರು. ವಿಶೇಷವಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಚಿವ ಈಶ್ವರಖಂಡ್ರೆ ಅವರ ತಂದೆ.
ಇಂದು ಸಂಜೆ ಅಂತ್ಯಕ್ರಿಯೆ: ಇಂದು ಮಧ್ಯಮ 1 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟು ಸಂಜೆ 5 ಗಂಟೆಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಭಾಲ್ಕಿಯ ಫಾರಂ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಹಿರಿಯ ರಾಜಕಾರಣಿಯ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

