ಮೈಸೂರು; ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಫೆಬ್ರವರಿ 12ರಂದು ದೇಶ ವ್ಯಾಪಿ ಕಾರ್ಮಿಕರ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ.

ಈ ಸಂಬಂಧ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಿಐಟಿಯು ಮೈಸೂರು ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಪಿ. ಜಯರಾಂ, ಕೇಂದ್ರ ಸರಕಾರವು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಮರಣಶಾಸನ ಬರೆದಿದೆ. ಒಂದೆಡೆ ಉದ್ಯೋಗವೂ ಇಲ್ಲ, ಹೋರಾಟದ ಹಕ್ಕು ಇಲ್ಲದಂತ್ತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನಾಲ್ಕು ಕಾರ್ಮಿಕ ಕೋಡ್ಗಳನ್ನು ರದ್ದು ಪಡಿಸಬೇಕು. ವಿಜಿ ರಾಮಮ್ ಜಿ ಕಾಯ್ದೆಯನ್ನು ಹಿಂಡೆಯಬೇಕು. ಶಾಂತಿ ಕಾಯ್ದೆ 2025, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ, ಸುಬ್ ಕಾ ಸುರಕ್ಷಾ ಸಭ್ಕಾ ಭೀಮಾ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿದರು. ಈ ತಿದ್ದುಪಡಿಗಳಿಂದ ಕಾರ್ಮಿಕರ ಜೀವನ ನಾಶವಾಗಿದೆ ಎಂದು ದೂರಿದರು.
ಅಲ್ಲದೆ, ಖಚಿತವಾದ ಉತ್ತಮ ಉದ್ಯೋಗ ಮತ್ತು ಕನಿಷ್ಠ ಕೂಲಿ ನೀಡಬೇಕು, ಸಂಘಟಿಸುವ ಹಕ್ಕು ಮತ್ತು ಸಮಾಜಿಕ ಚೌಕಾಸಿಯ ಹಕ್ಕುಗಳನ್ನು ಮರು ಸ್ಥಾಪಿಸಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಎಲ್ಲರಿಗೂ ಸಮಾಜಿಕ ಭದ್ರತೆ ಮತ್ತು ನಿವೃತ್ತಿ ವೇತನ ನೀಡಬೇಕು. ಹಾಗೂ ಎಲ್ಲರಿಗೂ ಆಹಾರ, ವಸತಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಒದಗಿಸಬೇಕೆಂದು ಆಗ್ರಹಿಸಿ ಈ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಕಾರ್ಮಿಕ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಹೋರಾಟಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಅಧ್ಯಕ್ಷ ಎಂ. ಅಣ್ಣಪ್ಪ, ಬಾಲಾಜಿ ರಾವ್ ಹಾಜರಿದ್ದರು.


