ಮೈಸೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಮತ್ತು ಇತರರ ಮೇಲೆ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಹಾಕಿರುವುದನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪುರಸ್ಕರಿಸಿರುವ ಹಿನ್ನಲ್ಲೆಯಲ್ಲಿ ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಮುಂದೆ ʻ ಸತ್ಯ ಮೇವ ಜಯತೆʼ ಪ್ಲೇ ಕಾರ್ಡ್ ಹಿಡಿದು ಸಂಭ್ರಮಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ವಕ್ತಾರ ಎಂ. ಲಕ್ಷ್ಮಣ್, ವಿರೋಧ ಪಕ್ಷ ಬಿಜೆಪಿಯವರು ಸ್ನೇಹಮಯಿ ಕೃಷ್ಣ ಎಂಬಾತನನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಡಲಾದ ಆರೋಪ ಮತ್ತು ಷಡ್ಯಂತರಗಳು ಸುಳ್ಳಾಗಿದ್ದು, ಸತ್ಯಕ್ಕೆ ಜಯ ಸಂದಿದೆ. ಆಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬದ ಸದಸ್ಯರು ಮುಡಾ ಹಗರಣದಲ್ಲಿ ಭಾಗಿಯಾಗಿಲ್ಲ ಎಂಬುವುದು ಸಾಭೀತಾಗಿದೆ ಎಂದು ತಿಳಿಸಿದರು.
ಮುಡಾದಲ್ಲಿ 50:50 ನಿವೇಶನ ಹಂಚಿಕೆಯಲ್ಲಿ ಹಗರಣವಾಗಿದೆ. ಇದರಲ್ಲಿ ಸಿಎಂ ಭಾಗಿಯಾಗಿದ್ದಾರೆ, ಹತ್ತಾರು ಕೋಟಿ ರೂ. ಹಗರಣವಾಗಿದೆ ಎಂದು ದೂರಲಾಗಿತ್ತು. ರಾಜ್ಯಪಾಲರ ಅನುಮತಿ ಪಡೆದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸದರಿ ಹಗರಣದಲ್ಲಿ ಸಿಎಂ ಮತ್ತು ಕುಟುಂಬ ಭಾಗಿಯಾಗಿಲ್ಲ, ಅವರ ಪ್ರಭಾವವೂ ಇಲ್ಲ ಎಂದು ಹೇಳಿ ಬಿ ರಿಪೋರ್ಟ್ ಹಾಕಲಾಗಿತ್ತು. ಮತ್ತೆ ಲೋಕಾಯುಕ್ತ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದ್ಹೇಳಿ ಜನಪತ್ರಿನಿಧಿಗಳ ವಿಶೇಷ ಕೋರ್ಟ್ ಮೊರೆ ಹೋಗಲಾಗಿತ್ತು. ಈಗ ಕೋರ್ಟ್ ರಿ ರಿಪೋರ್ಟ್ ಅನ್ನು ಪುರಸ್ಕರಿಸಿದೆ ಎಂದು ತಿಳಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಳೆದ 2 ವರ್ಷಗಳಲ್ಲಿ ಮೈಸೂರಿಗೆ ಒಂದೇ ಒಂದು ಯೋಜನೆ ಜಾರಿಗೆ ತಂದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನಪಿಸಿಕೊಂಡು ಜನ ಓಟ್ ಹಾಕಿದ್ದಾರೆ. ಕುಶಾಲನಗರಕ್ಕೆ ರೈಲು ತರುವುದಾಗಿ ಹೇಳಿದ್ರು, ಈಗ ರಾಜ್ಯ ಸರಕಾರ ಸಹಕರಿಸುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಸಿದರು.
ಇದಕ್ಕು ಮುನ್ನ ಡಿಸಿಸಿ ಮತ್ತು ನಗರ ಘಟಕ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಷಡ್ಯಂತರ ನಡೆಸಿದವರಿಗೆ ಧಿಕ್ಕಾರ, ಸತ್ಯ ಮೇವ ಜಯತೆ ಘೋಷಣೆಗಳನ್ನು ಹಾಕಿದರು. ಡಿಸಿಸಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ನಗರ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಭಾಸ್ಕರ್, ಬಿ.ಎಂ.ರಾಮು ಸೇರಿದಂತೆ ಅನೇಕರು ಭಾಗವಹಿಸಿದ್ದರು.


