Online News in ಕನ್ನಡ

ದಲಿತರ ಬದುಕು ಬವಣೆ ಬರಹದ ರೂಪದಲ್ಲಿ ದಾಖಲಾಗಬೇಕು : ಪತ್ರಕರ್ತ ಕೆ.ದೀಪಕ್‌ ಆಶಯ

ಹಿತಿ ಡಾ. ಹೆಬ್ಬಾಲೆ ಕೆ.ನಾಗೇಶ್‌ ಅವರ ಅಂಬಲಿ ಆತ್ಮಕಥನ ಬಿಡುಗಡೆ 

ಮೈಸೂರು: ದಲಿತರ ಬದುಕು – ಬವಣೆಗಳು ದಾಖಲೀಕರಣಗೊಂಡಾಗ ಮಾತ್ರ ಭವಿಷ್ಯದಲ್ಲಿ ದಲಿತ ಸಮುದಾಯದ ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ದೊರಕಲು ಸಾಧ್ಯ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌ ಅಭಿಪ್ರಾಯಪಟ್ಟರು. ಮಹಾನಾಯಕ ಭೀಮ್‌ರಾವ್‌ ಪೌಂಡೇಷನ್‌ ಮತ್ತು ಲಯನ್ಸ್‌ ಸೌಹಾರ್ದ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಸಾಹಿತಿ ಡಾ. ಹೆಬ್ಬಾಲೆ ಕೆ.ನಾಗೇಶ್‌ ಅವರ ʻಅಂಬಲಿʼ ಆತ್ಮಕಥನ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಅನ್ನ, ಅಕ್ಷರ, ಅವಕಾಶ ವಂಚಿತ ಜನಾಂಗ ತನ್ನ ಅಸ್ಥಿತ್ವಕ್ಕಾಗಿ ನಡೆಸಿದ ಹೋರಾಟ ಮತ್ತು ಎದುರಿಸಿದ ಸವಾಲುಗಳು ಬರಹದ ರೂಪದಲ್ಲಿ ದಾಖಲೀಕರಣಗೊಳ್ಳಬೇಕು. ಏಕೆಂದರೆ, ಇಂದಿನ ದಲಿತ ಯುವ ಪೀಳಿಗೆಗೆ ನಮ್ಮ ಪೂರ್ವಜರು ಅನುಭವಿಸಿದ ಯಾತನೆ, ಹಸಿವು, ಅವಮಾನಗಳ ಅರಿವು ಇಲ್ಲದಂತ್ತಾಗಿದೆ. ಇದರ ಅರಿವು ಬಂದಾಗ ಮಾತ್ರ ಹಠ, ಛಲ, ಸ್ವಾಭಿಮಾನ ಬರಲು ಸಾಧ್ಯ ಎಂದು ತಿಳಿಸಿದರು.
ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ಕೇವಲ ಓದು, ಹೋರಾಟಕ್ಕೆ ಸೀಮಿತವಾಗದೆ ತಮ್ಮ ಜೀವನದ ಪ್ರತಿಯೊಂದು ಕ್ಷಣಗಳನ್ನು ಅಕ್ಷರದ ಮೂಲಕ ದಾಖಲಿಸಿದರಿಂದಲೇ ಇಂದು ನಮಗೆ ಅವರ ಬರಹಗಳು ಜೀವನದ ಮಾರ್ಗದರ್ಶಿಯಾಗಿದೆ. ಬಾಬಾ ಸಾಹೇಬರಿಗೆ ದಾಖಲೀಕರಣದ ಮಹತ್ವದ ಅರಿತಿದ್ದರಿಂದ ಇತಿಹಾಸದ ಭೂಗರ್ಭದಲ್ಲಿ ಉದುಗಿ ಹೋಗಿದ್ದ ಅನೇಕ ಸತ್ಯ ಸಂಗತಿಗಳನ್ನು ಹೊರ ತೆಗೆದು ಬರಹದ ರೂಪದಲ್ಲಿ ನಮಗೆ ನೀಡಿದ್ದಾರೆ ಎಂದರು.
ಸಾಹಿತಿ ಡಾ. ಹೆಬ್ಬಾಲೆ ಕೆ. ನಾಗೇಶ್‌ ವಿರಚಿತ ʻಅಂಬಲಿʼ ಆತ್ಮಕಥನ ಕೇವಲ ಅವರೊಬ್ಬರ ಆತ್ಮಕಥನವಲ್ಲ. ಇದು ಇಡೀ ಭಾರತ ದೇಶದ ದಲಿತರನ್ನು ಪ್ರತಿನಿಧಿಸುತ್ತಿದೆ. ಆದ್ದರಿಂದ ʻಅಂಬಲಿʼ ಆತ್ಮಕಥನದ ಬಗ್ಗೆ ಅನೇಕ ವಿಚಾರ ಸಂಕಿರಣ, ಸಂವಾದ, ಚರ್ಚೆಗಳು ನಡೆಯಬೇಕು ಎಂದು ಸಲಹೆ ನೀಡಿದರು.


ಕೃತಿ ಕುರಿತು ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಡಾ. ಹೆಚ್.ಲಕ್ಷ್ಮೀನಾರಾಯಣಸ್ವಾಮಿ, ಅಂಬಲಿ ಆತ್ಮಕಥನ ಕೇವಲ ಕೆ.ನಾಗೇಶ್‌ ಅವರ ಆತ್ಮಕಥನವಲ್ಲ. ಬದಲಿಗೆ ಸಂವಿಧಾನದ ಆಶಯಗಳನ್ನು ಜಾಗೃತಿಗೊಳಿಸುವ ಹಾಗೂ ಇಡೀ ದಲಿತ ಸಮುದಾಯದ ಬದುಕನ್ನು ಪ್ರತಿನಿಧಿಸುತ್ತಿದೆ. ತಮ್ಮ ಬಾಲ್ಯದಿಂದ ಹೋರಾಟದ ಹಾದಿಯವರೆಗೂ ನೂರಾರು ಸಂಗತಿಗಳನ್ನು ದಾಖಲಿಸುವ ಮೂಲಕ ಭಾರತದ ಜಾತಿ ವ್ಯವಸ್ಥೆಯೊಳಗೆ ದಲಿತರ ಬದುಕು ಮತ್ತು ಬವಣೆಯ ಮೇಲೆ ಕನ್ನಡಿ ಹಿಡಿದಂತ್ತಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮೇಯರ್‌ ಪುರುಷೋತ್ತಮ್‌ ಮಾತನಾಡಿ, ಜಾತಿಯ ಕಾರಣಕ್ಕೆ ಯಾವುದೇ ತಪ್ಪನ್ನು ಮಾಡದ ಒಂದು ಸಮುದಾಯ ಪಟ್ಟ ಪಾಡು, ಅನುಭವಿಸಿದ ನೋವು, ಎದುರಿಸಿದ ಸವಾಲುಗಳು ಇಂದು ಸಂವಿಧಾನದಿಂದ ಪರಿಹಾರದ ಹಾದಿ ಹಿಡಿದಿದೆ. ಒಂದೇ ತರನಾದ ಶೋಷಣೆಯನ್ನು ಅನುಭವಿಸಿದ ಹೊಲಯ-ಮಾದಿಗ ಜನಾಂಗವನ್ನು ಇಂದು ರಾಜಕೀಯ ವ್ಯವಸ್ಥೆ ಒಳ ಮೀಸಲಾತಿಯ ಹೆಸರಿನಲ್ಲಿ ಹೊಡೆದಾಡಲು ಬಿಟ್ಟು ವಿಕೃತ ಕೇಕೆ ಹಾಕುತ್ತಿದೆ ಎಂದು ನೊಂದು ನುಡಿದರು.
ಕಾರ್ಯಕ್ರಮದಲ್ಲಿ ಕೃತಿಯ ಕರ್ತೃ ಸಾಹಿತಿ ಡಾ. ಹೆಬ್ಬಾಲೆ ಕೆ. ನಾಗೇಶ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್‌, ಮಹಾನಾಯಕ ಭೀಮ್‌ ರಾವ್‌ ಫೌಂಡೇಷನ್‌ನ ರಾಜ್ಯ ಕಾರ್ಯಾಧ್ಯಕ್ಷ ಡಾ. ಮಂಗಳಮೂರ್ತಿ, ಸ್ಪಂದನ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸತೀಶ್‌ ಜವರೇಗೌಡ, ಲಯನ್‌ ಕುಮಾರಸ್ವಾಮಿ, ಲಯನ್‌ ಎಂ.ಕೆ. ಶ್ರೀಧರ್‌, ಕೆ.ಎನ್.‌ ಚಂದ್ರಶೇಖರ್‌ ಪ್ರಕಾಶಕ ಪುಟ್ಟೇಗೌಡ ಉಪಸ್ಥಿತಿರಿದ್ದರು.

Call Now Button