ಮೈಸೂರು: ಮಾರ್ಚ್ನಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿರುವ ಸುಮಾರು ೬,೮೦೦ ಪೌರಕಾರ್ಮಿಕರನ್ನು ಖಾಯಂ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರ ಘೋಷಿಸಬೇಕೆಂದು ಮಾಜಿ ಮೇಯರ್ ಹಾಗೂ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ೩೫,೪೦೦ ಮಂದಿ ಪೌರಕಾರ್ಮಿಕರ ಪೈಕಿ ೨೯,೦೦೦ ಮಂದಿಯನ್ನು ಸರಕಾರ ಖಾಯಂ ಮಾಡಿದ್ದು, ಇನ್ನುಳಿದವರಿಗೂ ಖಾಯಂ ಭಾಗ್ಯ ಕಲ್ಪಿಸಬೇಕೆಂದು ಕೋರಿಕೊಂಡರು.
ಘನ ತ್ಯಾಜ್ಯ ಅಸ್ವಚ್ಛತಾ ವಾಹನ ಚಾಲಕರು, ಲೋಡರ್ಸ್ ಮತ್ತು ಕ್ಲೀನರ್ಸ್ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಗೊಳಿಸಿ ಇವರಿಗೆ ನೇರ ವೇತನ ಪಾವತಿ ಜಾರಿಗೊಳಿಸಬೇಕು. ೧೦ ಮಹಾನಗರ ಪಾಲಿಕೆಗಳಲ್ಲಿ ಸುಮಾರು ೬೭೦೦ ಮಂದಿ ಕಾರ್ಮಿಕರು ಒಳಚರಂಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಇವರನ್ನು ಖಾಯಂ ಮಾಡು ಕುರಿತು ಈಗಾಗಲೇ ಹಣಕಾಸು ಇಲಾಖೆ ೫೯೨ ಜನರನ್ನು ಖಾಯಂಗೊಳಿಸಲು ಅನುಮತಿ ನೀಡಿದ್ದು, ಇದರಲ್ಲಿ ೪೭೨ ಮಂದಿ ಕಾರ್ಮಿಕರ ಹುದ್ದೆಗಳನ್ನು ಖಾಯಂ ಮಾಡಲು ಸರಕಾರ ತೀರ್ಮಾನಿಸಿ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಇದರ ಆದೇಶ ಹೊರ ಬೀಳಬೇಕೆಂದು ಮನವಿ ಮಾಡಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರು ಮತ್ತು ಒಳಚರಂಡಿ ಸಹಾಯಕ ಕಾರ್ಮಿಕರು ಲೋಡರ್ಸ್, ಕ್ಲೀನರ್ಸ್ ಮತ್ತು ವಾಹನ ಚಾಲಕರು ಇತ್ಯಾದಿ ಕಾರ್ಮಿಕರಿಗೆ ಸರಕಾರಿ ನೌಕರರಿಗೆ ನೀಡುತ್ತಿರುವ ನಗದು ರಹಿತ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ಜಾರಿಗೆ ತರುವಂತೆ ನಾರಾಯಣ್ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ಶಿವಣ್ಣ, ಖಜಾಂಚಿ ಯತೀರಾಜ್, ಸಂಚಾಲಕ ಆರ್. ದಾಸು, ಜಿಲ್ಲಾಧ್ಯಕ್ಷ ಆರ್ಟಿಸ್ಟ್ ಎಸ್. ನಾಗರಾಜು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಹಾಜರಿದ್ದರು.

