ಜಿಲ್ಲಾಡಳಿತದ ಸೂಚನೆಗೆ ಕಿಮ್ಮಕು ನೀಡದ ಐಟಿಸಿ ಕಂಪನಿ
ಐಟಿಸಿ ಕಂಪನಿ ಅಧಿಕಾರಿಗಳಿಗೆ ಸಚಿವ ವೆಂಕಟೇಶ್ ಎಚ್ಚರಿಕೆ
ಮೈಸೂರು: ರಾಜ್ಯದಲ್ಲಿ ತಂಬಾಕು ಬೆಳೆ ದಿಢೀರ್ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರು ತಂಬಾಕು ಬೆಳೆಯುವುದನ್ನು ಬ್ಯಾನ್ ಮಾಡಿ ಪರಿಹಾರ ನೀಡುವುದರ ಮೂಲಕ ರೈತರ ಜೀವವನ್ನು ಕೇಂದ್ರ ಸರಕಾರ ರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ. ತಂಬಾಕು ಬಲೆ ಕುಸಿತದ ಹಿನ್ನಲ್ಲೆಯಲ್ಲಿ ಇಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರ ನೇತೃತ್ವದಲ್ಲಿ ಕರೆದಿದ್ದ ಸಭೆಯ ನಂತರ ರೈತರಿಂದ ಈ ಒತ್ತಾಯ ಕೇಳಿಬಂದಿತು.
ಸಭೆಯಲ್ಲಿ ಸಚಿವ ಕೆ. ವೆಂಕಟೇಶ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಡಿ. ರವಿಶಂಕರ್, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಕಾಂಗ್ರೆಸ್ ಲೋಕಸಭೆಯ ಪರಾಜಿ ಅಭ್ಯರ್ಥಿ ಎಂ.ಲಕ್ಷ್ಮಣ ಸೇರಿದಂತೆ ತಂಬಾಕು ಬೆಳೆಗಾರರು, ಐಟಿಸಿ ಕಂಪನಿಯ ಸ್ಥಳೀಯ ಅಧಿಕಾರಿಗಳು ಹಾಜರಿದ್ದರು.

ಕೇಂದ್ರದಿಂದ ಶೀಘ್ರ ಪರಿಹಾರ:
ಮೈಸೂರು: ತಂಬಾಕು ಬೆಲೆ ದಿಢೀರ್ ಕುಸಿತದಿಂದ ಕಂಗಾಲಾಗಿರುವ ರೈತರ ಸಂಕಷ್ಟ ಪರಿಹಾರಕ್ಕೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಅವರಿಗೆ ಪತ್ರ ಬರೆದಿರುವುದಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಸಭೆಯ ಬಳಿಕ ಮಾತನಾಡಿದ ಅವರು, ಕೇಂದ್ರ ಸರಕಾರ ತಂಬಾಕು ಉತ್ಪನ್ನಗಳ ಮೇಲೆ ಶೇ.೪೦ರಷ್ಟು ಜಿಎಸ್‌ಟಿ ತೆರಿಗೆಯನ್ನು ಹೆಚ್ಚಳ ಮಾಡಿರುವ ಹಿನ್ನಲ್ಲೆಯಲ್ಲಿ ತಂಬಾಕು ಬೆಲೆಯಲ್ಲಿ ಕುಸಿತ ಕಂಡಿದೆ. ಒಂದೆಡೆ ಇದರ ಪರಿಣಾಮ ಗ್ರಾಹಕರ ಮೇಲೂ ಹೊರೆಯಾಗಿದೆ. ತೆರಿಗೆ ಹೆಚ್ಚಳವನ್ನು ಪುನರ್ ಪರಿಶೀಲಿಸಬೇಕೆಂದು ಕೋರಿಕೊಳ್ಳಲಾಗಿದೆ. ಶೀಘ್ರ ಕೇಂದ್ರ ಸರಕಾರ ಪರಿಹಾರ ಸೂಚಿಸಲಿದೆ ಎಂದರು.
ತಂಬಾಕು ದಿಢೀರ್ ಕುಸಿತಕ್ಕೆ ತಂಬಾಕು ಮಂಡಿಯ ಬೇಜವಾಬ್ದಾರಿಯೂ ಕಾರಣ ಎಂಬ ದೂರು ಬಂದಿದೆ. ನಾವೆಲ್ಲೂ ಬೆಲೆ ಕುಸಿತಕ್ಕೆ ರಾಜ್ಯ ಸರಕಾರವನ್ನು ಹೊಣೆ ಮಾಡಿಲ್ಲ. ಆದರೆ, ಎಲ್ಲ ಸಮಸ್ಯೆಗಳಿಗೂ ಕೇಂದ್ರದ ಕಡೆ ಕೈತೋರಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ʻಐಟಿಸಿಯ ಏಕಸ್ವಾಮ್ಯತೆ ಕಾರಣ :
ಮೈಸೂರು: ಒಂದೆಡೆ ಐಟಿಸಿ ಕಂಪನಿಯ ಏಕಸ್ವಾಮ್ಯತೆ, ಮತ್ತೊಂದೆಡೆ ತಂಬಾಕು ಮಂಡಳಿಯ ಬೇಜವಾಬ್ದಾರಿತನʼ ಈ ಎರಡರ ಪರಿಣಾಮ ತಂಬಾಕು ಬೆಲೆ ಕುಸಿತ ಕಂಡಿದೆ ಎಂದು ಹುಣಸೂರು ತಾಲೂಕಿನ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ತಂಬಾಕು ಬೆಳೆಗಾರರ ಸಭೆಯಲ್ಲಿ ಭಾಗವಹಿಸಿ ತಂಬಾಕು ಬೆಲೆ ಕುಸಿತಕ್ಕೆ ನೈಜ ಕಾರಣಗಳನ್ನು ಮುಕ್ತವಾಗಿ ಬಿಚ್ಚಿಟ್ಟ ಮಂಜುನಾಥ್, ಸರಕಾರ ಮತ್ತು ರೈತರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾದ ತಂಬಾಕು ಮಂಡಳಿ ಜಾಣ ಮೌನ ವಹಿಸಿದ್ದು ತಪ್ಪು. ಹಿಂದೆ ಸಂಕಷ್ಟದ ದಿನಗಳು ಬಂದಾಗ, ಬೆಲೆ ನಿಗದಿಯಲ್ಲಿ ಮಂಡಳಿ ಮಧ್ಯ ಪ್ರವೇಶಿಸಿ ಸೂಕ್ತ ತೀರ್ಮಾನ ಮಾಡುತ್ತಿತ್ತು ಎಂದರು.
ಅಲ್ಲದೆ, ದೇಶದಲ್ಲಿ ಐಟಿಸಿ ಕಂಪನಿಯ ಏಕಸ್ವಾಮ್ಯತೆ ಮತ್ತು ಪ್ರಭಾವದಿಂದಾಗಿ ಕೇಂದ್ರ ಸರಕಾರ ಶೇ. ೪೦ರಷ್ಟು ಜಿಎಸ್‌ಟಿ ತೆರಿಗೆಯನ್ನು ಏರಿಸಿದ್ದರೂ, ಇದರ ಪರಿಣಾಮವನ್ನು ಐಟಿಸಿ ಕಂಪನಿ ಎದುರಿಸುತ್ತಿಲ್ಲ. ಬದಲಿಗೆ ಬೆಳೆಗಾರ ಮತ್ತು ತಂಬಾಕು ಬಳಸುವವರ ಮೇಲೆ ಬಿದ್ದಿರುವುದು ದುರದೃಷ್ಟಕರ ಎಂದು ನುಡಿದರು.

ಜಿಲ್ಲಾಡಳಿತದ ಸೂಚನೆಯನ್ನೂ ಐಟಿಸಿ ಕಂಪನಿ ಅಧಿಕಾರಿಗಳು ಪಾಲಿಸಲು ಹಿಂದೇಟು ಹಾಕಿದ ಹಿನ್ನಲ್ಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿರುವ ಐಟಿಸಿ ದಾಸ್ತಾನುಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಸಚಿವ ಕೆ.ವೆಂಕಟೇಶ್ ನೀಡಿದರು. ನಂತರ ಐಟಿಸಿ ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಬೆಲೆ ಸ್ಥಿರಗೊಳಿಸಲು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿದರು.
ತಂಬಾಕನ್ನು ಬ್ಯಾನ್ ಮಾಡಿ:
ಈನಡುವೆ, ಸಭೆಯಲ್ಲಿ ಭಾಗವಹಿಸಿದ್ದ ರೈತರು ಮಾಧ್ಯಮಗಳ ಮುಂದೆ ತಮ್ಮ ಬವಣೆ ಹೇಳಿಕೊಂಡು, ಕಷ್ಟಪಟ್ಟು, ಹಗಲು ರಾತ್ರಿ ಎನ್ನದೆ ಹೆಂಡತಿ ಮಕ್ಕಳನ್ನು ತೊರೆದು ತಂಬಾಕು ಬೆಳೆದ ಬಳಿಕವೂ ನಮಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದೇವೆ. ಅನೇಕ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ನಮಗೆ ಐಟಿಸಿ ಕಂಪನಿಗಳ ಜೊತೆ ಹೊಡೆದಾಡಲು ಸಾಧ್ಯವಿಲ್ಲ. ಆದ್ದರಿಂದ ತಂಬಾಕು ಬೆಳೆಯುವುದನ್ನು ನಿಷೇಧಿಸಿ, ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಒಕ್ಕೋರಲಿನ ಒತ್ತಾಯ ಮಾಡಿದರು.

