ಮೈಸೂರು: ಮೈಸೂರಿನ ಹಿರಿಮೆಯನ್ನು ಹೆಚ್ಚಿಸುತ್ತಿರುವ ಟಿ.ನರಸೀಪುರದಲ್ಲಿರುವ ಪ್ರತಿಷ್ಠಿತ ಮೈಸೂರು ರೇಷ್ಮೆ ನೂಲು ಉತ್ಪಾದನಾ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕ್ರೀಡಾಂಗಣ ನಿರ್ಮಾಣವನ್ನು ಸರಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಪ್ರಕಟಿಸಿದರು.
ಇಂದಿಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ರೀಡಾಂಗಣ ನಿರ್ಮಾಣಕ್ಕಾಗಿ ಫ್ಯಾಕ್ಟರಿ ಮುಚ್ಚಲು ಸಾಧ್ಯವೇ ? ನಾವೆಲ್ಲೂ ಕಾರ್ಖಾನೆಯನ್ನು ಮುಚ್ಚಿ ಕ್ರೀಡಾಂಗಣ ಕಟ್ಟುತ್ತೇವೆ ಎಂದು ಹೇಳಿಲ್ಲ. ಈ ವಿಷಯದಲ್ಲಿ ಕೆಲವರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು.
ರೇಷ್ಮೇ ಎಂಬುದು ವಿಶ್ವ ವಿಕಾಸಗೊಂಡಿರುವಂತದ್ದು ಟಿಪ್ಪು ಸುಲ್ತಾನ್ ಅವರು ಮೈಸೂರಿಗೆ ರೇಷ್ಮೆ ತಂದವರು. ಮೈಸೂರಿನ ಪರಂಪತೆ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವ ಮೈಸೂರು ಸಿಲ್ಕ್ ಫ್ಯಾಕ್ಟರಿ, ಮೈಸೂರು ಸ್ಯಾಂಡಲ್ ಸೋಪ್ ಅಂತಹ ಕಾರ್ಖಾನೆಯನ್ನು ಮುಚ್ಚಲು ಸಾಧ್ಯವೇ ? ಈ ಸಂಬಂದ ಈಗಾಗಲೇ ರೇಷ್ಮೆ ಇಲಾಖೆಯ ಅಧಿಕಾರಿಗಳು, ಕ್ರೀಡಾ ಇಲಾಖೆ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಒಂದು ವೇಳೆ ಸಿಲ್ಕ್ ಫ್ಯಾಕ್ಟರಿ ಅಸ್ಥಿತ್ವಕ್ಕೆ ಅಥವಾ ವಿಸ್ತರಣೆಗೆ ಒಂಚಿಂಚು ಕೊರತೆಯಾದರೂ ನಾವು ಕ್ರೀಡಾಂಗಣ ಮಾಡುವುದಿಲ್ಲ. ಇದು ಪ್ರತಿಷ್ಠೆಯ ಪ್ರಶ್ನೆಯೇ ಅಲ್ಲ ಎಂದು ತಿಳಿಸಿದರು.
ಸಂವಿಧಾನ ಹೇಳಿದಂತೆ ಮೀಸಲಾತಿ ನಿರ್ಧಾರ:
ಮೈಸೂರು: ರಾಜ್ಯದಲ್ಲಿ ತಲೆದೋರಿರುವ ಒಳಮೀಸಲಾತಿ ಗೊಂದಲ ಕುರಿತು ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಪ್ರತಿಯೊಬ್ಬರೂ ಅವರಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಆದರೆ, ಮೀಸಲಾತಿ ವಿಷಯದಲ್ಲಿ ಸಂವಿಧಾನ ಮತ್ತು ಕಾನೂನು ಹೇಗೆ ಹೇಳುತ್ತದೆ ಹಾಗೆಯೇ ನಡೆಯುತ್ತದೆ. ಒಳ ಮೀಸಲಾತಿ ಮಸೂದೆ ಕುರಿತು ಕ್ಯಾಬಿನೆಟ್ನಲ್ಲಿ ನಡೆದಿರುವ ಚರ್ಚೆ ಬಗ್ಗೆ ಇಲ್ಲಿ ಹೇಳಲಾರೆ.
ಮಾತನಾಡುವುದು, ಟೀಕಿಸುವುದು ಅವರವರ ಹಕ್ಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಹಾಗಾಗಿ ಮಾತನಾಡುತ್ತಿದ್ದರೆ. ಆದರೆ, ಯಾರಿಗೂ ಪೂರ್ಣ ವಿವರ ಗೊತ್ತಿಲ್ಲ. ನಾನು ಹೇಳಲೂ ಸಾಧ್ಯವಿಲ್ಲ. ಆದರೆ, ಎಲ್ಲರೂ ಹೇಳಿದಂತೆ ಮಾಡಲು ಸಾಧ್ಯವಿಲ್ಲ. ಇದು ಒಂದು ವರ್ಗಕ್ಕೆ ಅನ್ಯಾಯ, ನ್ಯಾಯದ ಪ್ರಶ್ನೆಯಲ್ಲ. ಎಲ್ಲವನ್ನೂ ಸಂವಿಧಾನ ಮತ್ತು ಕಾನೂನು ಹೇಳಿದಂತೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್ ಹಾಜರಿದ್ದರು.
ಸಿಲ್ಕ್ ಫ್ಯಾಕ್ಟರಿ ವಿಷಯದಲ್ಲಿ ಕೆಲವರು ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ. ಫ್ಯಾಕ್ಟರಿಗೆ ತೊಂದರೆ ಆದಾಗಲೆಲ್ಲ ಕಾಲಕಾಲಕ್ಕೆ ಹಣ ಕೊಡುತ್ತಿರುವುದು ಸಿದ್ದರಾಮಯ್ಯ ಸರಕಾರವೇ ವಿನಃ ಮಾತನಾಡುತ್ತಿರುವವರಲ್ಲ. ಈಗಾಗಲೇ ಸ್ಥಳ ಪರಿಶೀಲಿಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಿಲ್ಕ್ ಫ್ಯಾಕ್ಟರಿಗೆ ಒಂದಿಂಚು ಜಾಗ ಕೊರತೆಯಾದರೂ ಕ್ರೀಡಾಂಗಣವನ್ನು ನಾವು ಮಾಡುವುದಿಲ್ಲ. ಬೇರೆ ಸ್ಥಳವನ್ನು ಪರಿಶೀಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರಿಗರ ಬಗ್ಗೆ ಮಾಹಿತಿ ಇಲ್ಲ:
ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧ ಆರಂಭಗೊಂಡಿರುವುದರಿಂದ ಕನ್ನಡಿಗರ ರಕ್ಷಣಗೆ ಈಗಾಗಲೇ ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಂಡಿದ್ದು, ಮೈಸೂರಿಗರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಸಹಕಾರದೊಂದಿಗೆ ಭಾರತೀಯರನ್ನು ಮತ್ತು ಕನ್ನಡಿಗರನ್ನು ರಕ್ಷಿಸಬೇಕಿದೆ ಎಂದು ತಿಳಿಸಿದರು.


