ಮೈಸೂರು: ಅರಿವು ಎಂಬುವುದು ಬದುಕು, ಅಜ್ಞಾನ ಎಂಬುವುದು ಸಾವು. ಅರಿವು ಇದ್ದಾಗ ಮಾತ್ರ ನಿಮ್ಮ ಹಕ್ಕು, ಅವಕಾಶ, ಅಧಿಕಾರ ತಿಳಿಯಲಿದೆ. ಆದ್ದರಿಂದ ಮಹಿಳೆಯರು ಅರಿವನ್ನು ಹೊಂದಿ ಸಶಕ್ತಳಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಕರೆ ನೀಡಿದರು.
ನಗರದ ಟೌನ್ಹಾಲ್ನಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ಹಕ್ಕು ಅಧಿಕಾರವನ್ನು ಕೊಡದೆ ಹೋಗಿದ್ದರೆ ಇಂದು ನಾನೂ ಸಹ ಈ ವೇದಿಕೆಯಲ್ಲಿ ನಿಂತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ನುಡಿದರು.
ನಮ್ಮ ಮಹಿಳೆಯರಿಗೆ ಇಂದಿಗೂ ಸಹ ಅವರವರ ಹಕ್ಕುಗಳ ಬಗ್ಗೆ ಅರಿವಿಲ್ಲ. ತಮ್ಮ ಏಳಿಗೆಗೆ ಸರಕಾರ ನೀಡುತ್ತಿರುವ ಯೋಜನೆಗಳೇನು ? ಎಂಬ ಪೂರ್ಣ ಜ್ಞಾನವಿಲ್ಲ. ತಮ್ಮ ಮೇಲಾಗುವ ದಾಳಿಗಳಿಗೆ ನ್ಯಾಯ ಪಡೆದುಕೊಳ್ಳುವ ಮಾರ್ಗವೂ ಗೊತ್ತಿಲ್ಲ. ನಮ್ಮ ಹೆಣ್ಣು ಮಕ್ಕಳು ಪತ್ರಿಕೆಗಳನ್ನು ಓದುವುದಿಲ್ಲ. ಮೊಬೈಲ್ ನೋಡಿದ್ರೂ, ಏನನ್ನು ನೋಡಬೇಕೋ ಅದನ್ನು ನೋಡುವುದಿಲ್ಲ ಎಂದು ವಿಷಾಧಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಪ್ರಕೃತಿಯ ಸೃಷ್ಟಿಯಲ್ಲಿ ಸ್ತ್ರೀ-ಪುರುಷ ಇಬ್ಬರೂ ಸಮಾನರು. ಪ್ರಕೃತಿಯೇ ಈ ಎರಡು ಸೃಷ್ಟಿಗೆ ಸಮಾನತೆ ನೀಡಿರುವಾಗ ಸಮಾಜದಲ್ಲಿ ತಾರತಮ್ಯ ಒಳ್ಳೆಯದಲ್ಲ. ಇಂದು ಒಂದು ದೇಶ ಮತ್ತು ಸಮಾಜ ಏಳಿಗೆ ಆಗಬೇಕಾದಲ್ಲಿ ಮಹಿಳೆಯ ಪಾತ್ರ ದೊಡ್ಡದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಹಿಳೆಯರಿಗೆ ಸೀರೆಗಳನ್ನು ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಸಮಿತಿಯ ರಾಜ್ಯಾಧ್ಯಕ್ಷೆ ವಿ.ಪಿ.ಸುಶೀಲ ಹಾಗೂ ಪದಾಧಿಕಾರಿಗಳು ಹಾಜರಿದ್ದರು.


