ಮೈಸೂರು: ರಾಜ್ಯದಲ್ಲಿ ಸುಮಾರು 101 ಜಾತಿಗಳು ಪರಿಶಿಷ್ಟ ಜಾತಿಗಳ ಪಟ್ಟಿಯಲಿದ್ದು, ಈ ಎಲ್ಲ ಜಾತಿಗಳು ಸಮನಾಗಿ ಪ್ರಾತಿನಿಧ್ಯವನ್ನು ಪಡೆಯದ ಕಾರಣ ಒಳ ಮೀಸಲಾತಿ ಅವಶ್ಯಕತೆ ಇದೆ ಎಂದು ಭಾರತೀಯ ವಿದ್ಯಾರ್ಥಿ ಸಂಘದ ರಾಜ್ಯ ಸಂಚಾಲಕ ಡಾ. ಶ್ರೀನಿವಾಸ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಟಿ ನಡೆಸಿದ ಅವರು, ಸಿವಿಲ್ ನೇಮಕಾತಿಗಾಗಿ ಹಿಂದಿನ ಸರಕಾರವು ಘೋಷಿಸಿದ್ದಂತೆ ಪರಿಶಿಷ್ಟ ಜಾತಿಗೆ ಒಟ್ಟಾರೆ ಶೇ.17 ಹಾಗೂ ಪರಿಶಿಷ್ಗಟ ವರ್ಗಗಳಿಗೆ ಶೇ. 7ರಷ್ಟು ಮೀಸಲಾತಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.\
ಒಳಮೀಸಲಾತಿ ಗೊಂದಲಕ್ಕೆ ಕಾರಣ ಏನು ?
ಚುನಾವಣಾ ಪೂರ್ವದಲ್ಲಿ ಒಳಮೀಸಲಾತಿ ಜಾತಿಗೆ ತರುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ರಾಜ್ಯ ಸರಕಾರ ನ್ಯಾ. ನಾಗಮೋಹನ್ ದಾಸ್ ಅವರಿಂದ ಪ್ರತ್ಯೇಕ ಸರ್ವೆ ಮಾಡಿಸಿ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ದಲಿತ ಮುಖ್ಯಮಂತ್ರಿ ಮುನ್ನಲೆಗೆ ಬರುತ್ತಿದ್ದಂತೆಯೇ ಎಡ-ಬಲ ಸಮುದಾಯಗಳನ್ನು ಬಡಿದಾಟಕ್ಕೆ ಬಿಟ್ಟಿದೆ. ತಕ್ಷಣ, ಒಳಮೀಸಲಾತಿ ಜಾರಿ ಆಗಬೇಕು ಹಾಗೂ ರೋಸ್ಟರ್ ಬಿಂದು ಪರಿಷ್ಕರಿಸಿ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ. 1ರಷ್ಟು ಮೀಸಲಾತಿ ನೀಡಬೇಕು
– ಡಾ. ಹರಿರಾಮ್, ಬಿವಿಎಸ್ ಮುಖಂಡ
ಸಿವಿಲ್ ನೇಮಕಾತಿಗಾಗಿ ಪ್ರಕಟಿಸಿರುವ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಿ ಸಮಾನವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಯ ಎ, ಬಿ ಮತ್ತು ಸಿ ಪ್ರವರ್ಗಗಳಿಗೆ ಕ್ರಮವಾಗಿ 1, 2 ಮತ್ತು 3ನೇ ರೋಸ್ಟರ್ ಬಿಂದುಗಳನ್ನು ನಿಗದಿ ಮಾಡಿ ಈ ಕೂಡಲೇ ಆದೇಶಿಸಬೇಕೆಂದೂ ಹಾಗೂ ಯಾವುದೇ ಸಮುದಾಯಗಳಿಗೂ ಅನ್ಯಾಯವಾಗದಂತೆ ಗೊಂದಲಕ್ಕೆ ತೆರೆ ಎಳೆಯಬೇಕೆಂದರು.
ಅತಿ ಹೆಚ್ಚು ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಕಡಿಮೆ ಹಿಂದುಳಿದ ಸಮುದಾಯಗಳೊಂದಿಗೆ ಜೋಡಿಸಿರುವ ಸರಕಾರದ ನಡೆ ತಪ್ಪು, ಅರೆ ಅಲೆಮಾರಿ ಸಮುದಾಯಗಳನ್ನು ಈ ಗುಂಪಿನಿಂದ ಪ್ರತ್ಯೇಕಿಸಿ ಶೇ 1 ಪ್ರತ್ಯೇಕ ಮೀಸಲಾತಿ ಜಾರಿ ಮಾಡಬೇಕೆಂದು ಹಾಗೂ ಖಾಸಗೀಕರಣದಲ್ಲೂ ಮೀಸಲಾತಿ ಜಾರಿಗೆ ಬರಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಸಲೆ ಸಿದ್ದರಾಜು, ಮಹದೇವ್ ಕೋಟೆ, ಸಾಗರ್ ಹಾಜರಿದ್ದರು.


