Online News in ಕನ್ನಡ

ಉಪ ಚುನಾವಣೆ: ದಾವಣಗೆರೆ ಟಿಕೆಟ್‌ ಘೋಷಣೆಗೂ ಮೊದಲೇ ಶಾಮನೂರು ಕುಟುಂಬ ಕಣಕ್ಕೆ

ದಾವಣಗೆರೆ: ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಅಧಿಕೃತ ಅಭ್ಯರ್ಥಿಯನ್ನು ಘೋಷಿಸುವ ಮೊದಲೇ ಶಾಮನೂರು ಕುಟುಂಬ ಕಣಕ್ಕೆ ಇಳಿದಿದ್ದು, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಶಾಮನೂರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಕ್ಷೇತ್ರದಿಂದ ಸ್ಪರ್ಧಿಸಲು ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆಂಬ ದೊಡ್ಡ ಕೂಗು ಎಬ್ಬಿರುವ ಬೆನ್ನ ಹಿಂದೆಯೆ ಶಾಮನೂರು ಕುಟುಂಬ ಒಂದೆಜ್ಜೆ ಮುಂದೋಗಿರುವುದು ಕುತೂಹಲ ಕೆರಳಿಸಿದೆ.
ಇಂದು ತಾಯಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಜತೆ ಮಹಾನಗರ ಪಾಲಿಕೆಗೆ ಆಗಮಿಸಿದ ಸಮರ್ಥ ಚುನಾವಣಾಧಿಕಾರಿ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು. ʻಬಿʼ ಫಾರಂ ಇಲ್ಲದೆಯೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎರಡು ಪ್ರತಿ ನಾಮಪತ್ರಗಳನ್ನು ಚುನಾವಣಾಧಿಕಾರಿ ಸಂತೋಷ್‌ಕುಮಾರ್‌ ಅವರಿಗೆ ಸಲ್ಲಿಸಿದರು.
ನಂತರ ಮಾತನಾಡಿದ ಸಮರ್ಥ್‌, ಹಬ್ಬದ ದಿನ ಶುಭಗಳಿಗೆ ಕಾರಣಕ್ಕೆ ನಾನು ಇಂದೇ ನಾಮಪತ್ರ ಸಲ್ಲಿಸಿದ್ದೇನೆ. ಸೋಮವಾರ ಮತ್ತೊಮ್ಮೆ ರಾಜ್ಯ ನಾಯಕರೊಂದಿಗೆ ಉಮೇದುವಾರಿಕೆ ಸಲ್ಲಿಸುವೆ. ಕಾಂಗ್ರೆಸ್‌ ಬಿ ಫಾರಂ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಟ್ಟಿರುದ್ದು ನಮ್ಮ ತಾತ ಶಾಮನೂರು ಶಿವಶಂಕರಪ್ಪ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಶಕ್ತಿಪೀಠದಂತೆ ಕೆಲಸ ಮಾಡಿದ್ದಾರೆ. ಅವರ ಶ್ರೀರಕ್ಷೆ ಸದಾ ನನ್ನ ಮೇಲಿದೆ. ಮುಸ್ಲಿಂ ಸಮುದಾಯದ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ಬಾಗಲಕೋಟೆಯಿಂದ ಬಿಜೆಪಿ ಅಭ್ಯರ್ಥಿ ನಾಮಪತ್ರ: ಇನ್ನು ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಸಿದ್ದಾರೆ.

Call Now Button