Online News in ಕನ್ನಡ

ಮುಂದಿನ ದಿನಗಳಲ್ಲಿ 8 ಸಾವಿರ ಪಿಎಸ್‌ಐ ಹುದ್ದೆಗಳ ಭರ್ತಿ: ಸಿಎಂ ಸಿದ್ದರಾಮಯ್ಯ

ಮೈಸೂರು : ಮೂರು ವರ್ಷಗಳ ಅವಧಿಯಲ್ಲಿ 4011 ಮಂದಿ ಪಿಎಸ್‌ಐ ಸ್ಥಾನಗಳನ್ನು ಭರ್ತಿ ಮಾಡಿದ್ದು, ಖಾಲಿ ಇರುವ 8000 ಪಿಎಸ್‌ಐ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಕರ್ನಾಟಕ ಪೊಲೀಸ್ ಅಕಾಡೆಮಿ ವತಿಯಿಂದ ಅಕಾಡೆಮಿಯ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ 46ನೇ ತಂಡದ ಪೊಲೀಸ್ ಉಪನಿರೀಕ್ಷಕರು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪದ್ದ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು 327 ಪೊಲೀಸ್ ಸೇವೆಗೆ ಸೇರ್ಪಡೆಯಾಗುತ್ತಿದ್ದೀರಿ. ಪೊಲೀಸ್‌ ಸೇವೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ಜನಸೇವೆಯ ಗುಣ ಇರಬೇಕೆಂದು ಕಿವಿಮಾತು ಹೇಳಿದರು.


ಸಮಾಜದಲ್ಲಿ ಜಾತಿ ವ್ಯವಸ್ಥೆ, ಬಡತನ, ಮಹಿಳೆಯರು, ದುರ್ಬಲ ವರ್ಗದವರೆಲ್ಲರನ್ನು ಕೂಡ ರಕ್ಷಣೆ ಮಾಡುವುದು ಪೊಲೀಸ ಇಲಾಖೆಯ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಕಾನೂನು ವ್ಯವಸ್ಥೆಗಳನ್ನು ಕಾಪಾಡಬೇಕಾದದ್ದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಎಂದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವಿರಬೇಕು ಹಾಗೂ ನಿರ್ಭಯವಾಗಿ ಬದುಕುವಂತಹ ವಾತಾವರಣವಿರಬೇಕು‌ ಸಮಾಜದಲ್ಲಿ ಸಮಾನ ನ್ಯಾಯ ವಿತರಣೆ ಬಹಳ ಮುಖ್ಯ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಎಷ್ಟೇ ಕಷ್ಟವಾದರೂ ನ್ಯಾಯ ವಿತರಣೆಯಲ್ಲಿ ನ್ಯಾಯವನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ನ್ಯಾಯ ವಿತರಣೆ ಮಾಡುವ ಕೆಲಸದಲ್ಲಿ ಯಾರ ಜೊತೆಯಲ್ಲೂ ರಾಜಿ ಆಗಬಾರದು ಹಾಗೂ ಆಸೆ ಆಮಿಷ ಗಳಿಗೆ ಬಲಿಯಾಗದೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕು ಎಂದರು.


ತರಬೇತಿ ಸಮಯದಲ್ಲಿ ತಮಗೆ ಹೇಳಿ ಕೊಟ್ಟಿರುವ ವಿಷಯಗಳನ್ನು ಜೀವನದಲ್ಲಿ ಪಾಲನೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಇಂತಹ ಅಪರಾಧಗಳನ್ನು ತಡೆಗಟ್ಟುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು. ಪೊಲೀಸ್ ಅಧಿಕಾರಿಗಳಿಗೆ ಮೊದಲನೆಯದಾಗಿ ಧೈರ್ಯ ಇರಬೇಕು. ಧೈರ್ಯವನ್ನು ಪ್ರದರ್ಶಿಸುವಂತಹ ಕೆಲಸವನ್ನು ತಾವೆಲ್ಲರೂ ಮಾಡುತ್ತೀರಿ ಎಂಬ ನಂಬಿಕೆ ನಮಗಿದೆ ಎಂದು ನುಡಿದರು.
ಇಂದು ಸಮಾಜದಲ್ಲಿ ಅನೇಕ ಸಮಸ್ಯೆಗಳು ತಲೆದೂ ಇರುತ್ತವೆ. ಅದರಲ್ಲೂ ಇಂದು ಯುವಕ ಮತ್ತು ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿರುವುದನ್ನು ಕಾಣಬಹುದಾಗಿದೆ. ಮಾದಕ ವಸ್ತು ಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ ಮಹದೇವಪ್ಪ, ಪಶು ಸಂಗೋಪನೆ ಸಚಿವರದ ವೆಂಕಟೇಶ್, ಮಾಜಿ ಸಚಿವರು ಮತ್ತು ಶಾಸಕರಾದ ತನ್ವೀರ್ ಸೇಠ್ ,ಶಾಸಕರಾದ ಶ್ರೀವಾತ್ಸ, ಪೋಲಿಸ್ ಮಹಾ ನಿರ್ದೇಶಕರಾದ ಡಾ.ಎಂ. ಎ. ಸಲೀಂ, ಹೆಚ್ಚುವರಿ ಪೋಲಿಸ್ ಮಹಾ ನಿರ್ದೇಶಕರಾದ ದೇವ ಜ್ಯೋತಿ ರೇ, ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ವಿಷ್ಣುವರ್ಧನ್, ಉಪನಿರ್ದೇಶಕರಾದ ಚನ್ನಬಸವಣ್ಣ ಹಾಗೂ ಹಿರಿಯ ಪೊಲೀಸ ಅಧಿಕಾರಿಗಳು ಉಪಸ್ಥಿತರಿದ್ದರು.

Call Now Button