Online News in ಕನ್ನಡ

ಜಯಲಕ್ಷ್ಮೀ ವಿಲಾಸ ಅರಮನೆಯನ್ನೇ ಖಾಸಗಿ ಕಂಪನಿಗೆ ಲೀಸ್‌ ನೀಡಲು ಮೈವಿವಿ ನಿರ್ಧಾರ !?

ಮೈಸೂರು ವಿವಿ ಸಿಂಡಿಕೇಟ್‌ ಸಭೆಯಲ್ಲಿ ಎಂಓಯು ಬಗ್ಗೆ ಚರ್ಚೆ
ಖಾಸಗಿ ಕಂಪನಿಯೊಂದಕ್ಕೆ ೪೦ ವರ್ಷಗಳಿಗೆ ಉಚಿತ ಲೀಸ್‌ಗೆ ವಿರೋಧ

ವಿಜಯಕಾಲ ವಿಶೇಷ:
ಮೈಸೂರು: ಒಂದಾನೊಂದು ಕಾಲದಲ್ಲಿ ಶೈಕ್ಷಣಿಕ ಸಾಧನೆಗಳಿಗೆ ಪ್ರಖ್ಯಾತವಾಗಿದ್ದ ಮೈಸೂರು ವಿಶ್ವ ವಿದ್ಯಾನಿಲಯವು ಇದೀಗ ಭ್ರಷ್ಟಾಚಾರ, ಅಕ್ರಮ, ದುರಾಡಳಿತಕ್ಕೆ ಕುಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಐತಿಹಾಸಿಕ ಜಯಲಕ್ಷ್ಮೀ ವಿಲಾಸ ಅರಮನೆಯನ್ನೇ ಖಾಸಗಿ ಕಂಪನಿಯೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಓಯು) ಸಹಿ ಹಾಕಲು ಮೈಸೂರು ವಿಶ್ವ ವಿದ್ಯಾನಿಲಯ ಮುಂದಾಗಿರುವುದು ಬೆಳಕಿಗೆ ಬಂದಿದೆ.


ಮಾರ್ಚ್‌ ತಿಂಗಳ ೧೩ ಮತ್ತು ೨೭ರಂದು ನಡೆದ ಮೈಸೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್‌ ಸಭೆಯಲ್ಲಿ ಈ ಚರ್ಚೆ ನಡೆದಿದ್ದು, ಸಿಂಡಿಕೇಟ್‌ ಸದಸ್ಯ ಡಾ. ಟಿ. ಆರ್.‌ ಚಂದ್ರಶೇಖರ್ ಸೇರಿದಂತೆ ಕೆಲವು ಸದಸ್ಯರು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಡೆಕ್ಕನ್‌ ಹೆರಿಕೇಜ್‌ ಎಂಬ ಕಂಪನಿಯು ಅಮೇರಿಕಾ ಮೂಲದ ಸಂಸ್ಥೆಯಿಂದ ಆರ್ಥಿಕ ನೆರವು ಪಡೆದು ಅರಮನೆಯ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಸದರಿ ಕಂಪನಿಯೊಂದಿಗೆ ಎಂಓಯು (ಮೆಮೊರಾಂಡಂ ಆಫ್‌ ಅಂಡರ್‌ಸ್ಟಾಂಡಿಂಗ್‌) ಒಪ್ಪಂದ ಮಾಡಿಕೊಳ್ಳಬೇಕೆಂಬ ಚರ್ಚೆ ನಡೆದಿದೆ. ಆದರೆ, ಅರಮನೆಯನ್ನು ಖಾಸಗಿ ಕಂಪನಿಗಳ ಸ್ವಾಧೀನಕ್ಕೆ ನೀಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಚರ್ಚೆ ಮತ್ತು ಸರಕಾರದ ಅನುಮತಿ ಇಲ್ಲದೆ ಈ ಪ್ರಸ್ತಾವನೆಯನ್ನು ಜಾರಿಗೆ ತರಬಾರದು ಎಂಬ ಷರತ್ತನ್ನು ಕೆಲವರು ಹಾಕಿದ್ದಾರೆ.


ಈನಡುವೆ, ಸಿಂಡಿಕೇಟ್‌ ಸದಸ್ಯ ಡಾ.ಟಿ. ಆರ್.‌ ಚಂದ್ರಶೇಖರ್ ಅವರು, ಮೈಸೂರು ವಿಶ್ವವಿದ್ಯಾನಿಲಯವು ಕಾನೂನು ಬಾಹಿರವಾಗಿ ಡೆಕ್ಕನ್‌ ಹೆರಿಟೇಜ್‌ ಎಂಬ ಸಂಸ್ಥೆಗೆ ೪೦ ವರ್ಷಗಳ ಅವಧಿಗೆ ಉಚಿತವಾಗಿ ಲೀಸ್‌ ನೀಡಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುತ್ತಿದ್ದು, ಮೈಸೂರು ವಿಶ್ವ ವಿದ್ಯಾನಿಲಯದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದ್ದಾರೆ.

ಅರಮನೆಯ ವೈಶಿಷ್ಟ್ಯವೇನು ?
೧೯೦೫ರಲ್ಲಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದ ಐತಿಹಾಸಿಕ ಪರಂಪರೆಯ ಸಂಕೇತವಾದ ʻಜಯಲಕ್ಷ್ಮೀ ವಿಲಾಸ ಮ್ಯಾನ್ಷನ್‌ (ಅರಮನೆ) ಮೈಸೂರು ಪರಂಪರೆಯ ಸಂಕೇತಗಳಲ್ಲಿ ಒಂದು. ಮಹಾರಾಜ ಚಾಮರಾಜ ಒಡೆಯರ್‌ ಅವರ ಹಿರಿಯ ಮಗಳು ರಾಜಕುಮಾರಿ ಜಯಲಕ್ಷ್ಮೀ ಅಮ್ಮಣಿಗಾಗಿ ಆಗಿನ ಕಾಲಕ್ಕೇ ೭ ಲಕ್ಷ ರೂ.ಗಳ ವೆಚ್ಚದಲ್ಲಿ ಈ ಅರಮನೆ ನಿರ್ಮಿಸಲಾಗಿತ್ತು. ಇದನ್ನು ಮೂಲತಃ ʻಮೊದಲ ರಾಜಕುಮಾರಿ ಮಹಲುʼ ಎಂದು ಕರೆಯಲಾಗಿದೆ.


ಕಾಲ ಉರುಳಿದಂತೆ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್‌ ಅವರು ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಲು ಕೊಡುಗೆಯಾಗಿ ನೀಡಿದರು.
ರಾಷ್ಟ್ರಕವಿ ಕುವೆಂಪು ಅವರು ಉಪ ಕುಲಪತಿಯಾಗಿದ್ದ ಸಂದರ್ಭದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟಿದ್ದು ಒಂದು ಐತಿಹಾಸಿದ ಮಹತ್ವದ ಸಂಗತಿಯೂ ಹೌದು. ಈ ಕಟ್ಟಡವನ್ನು ಬಹಳ ಸಮಯದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದರಿಂದ ಇನ್ಫೋಸಿಸ್‌ ಫೌಂಡೇಶನ್‌ ನಿಧಿಯಿಂದ ಸುಮಾರು ೧.೧೭ ಕೋಟಿ ರೂ.ಗಳ ವೆಚ್ಚದಲ್ಲಿ ಕಟ್ಟಡವನ್ನು ನವೀಕರಣಗೊಳಿಸಲಾಗಿತ್ತು.


ನವೀಕರಣಗೊಂಡ ಅರಮನೆಯನ್ನು ೨೦೦೬ರಲ್ಲಿ ಅಂದಿನ ರಾಜ್ಯಪಾಲರು ಉದ್ಘಾಟಿಸಿದ್ದರು.
ಈ ಅರಮನೆಯಲ್ಲಿ ೧೨೫ ಕೊಠಡಿಗಳು, ೩೦೦ ಕಿಟಕಿಗಳು, ೨೮೭ ಅದ್ಬುತವಾಗಿ ಕೆತ್ತಿದ ಬಾಗಿಲುಗಳನ್ನು ಹೊಂದಿದ್ದು, ಇದು ೬ ಎಕರೆ ವಿಸ್ತೀರ್ಣವನ್ನು ಹೊಂದಿದೆ. ಪ್ರತಿ ಬದಿಯಲ್ಲಿಯೂ ಪ್ರವೇಶದ್ವಾರಗಳಿವೆ, ಪರಸ್ಪರ ಭಿನ್ನವಾಗಿವೆ. ಈ ಅರಮನೆಯನ್ನು ಇಟ್ಟಿಗೆ, ಗಾರೆ, ಕಬ್ಬಿಣ ಮತ್ತು ಮರದಿಂದ ನಿರ್ಮಿಸಲಾಗಿದೆ.
ಇತ್ತೀಚೆಗೆ ಸುಮಾರು ೩೩ ಕೋಟಿ ರೂ.ಗಳ ಸಿಎಸ್‌ಆರ್‌ ಅನುದಾನದಲ್ಲಿ ನವೀಕರಣಗೊಂಡಿರುವ ಈ ಐತಿಹಾಸಿಕ ಅರಮನೆ, ಸಾರ್ವಜನಿಕ ಪರಂಪರೆ ಸಂರಕ್ಷಣೆ ಮತ್ತು ಶೈಕ್ಷಣಿಕ ಬಳಕೆಯ ಉದ್ದೇಶದಿಂದ ಅಭಿವೃದ್ಧಿ ಪಡಿಸಲಾಗಿದೆ.

ಒಟ್ಟಾರೆ ಅಕ್ರಮ ನೇಮಕಾತಿ, ನಕಲಿ ಅಂಕಪಟ್ಟಿ, ಪರೀಕ್ಷಾ ಅಕ್ರಮ, ಅಭಿವೃದ್ಧಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ಹೀಗೆ ಸಾಲು ಸಾಲು ಆರೋಪಗಳನ್ನು ಹೊತ್ತು ಸಾಗುತ್ತಿರುವ ಮೈಸೂರು ವಿಶ್ವ ವಿದ್ಯಾನಿಲಯದ ಕಳಂಕಗಳ ಸಾಲಿ ಅರಮನೆಯನ್ನೇ ಖಾಸಗಿ ಕಂಪನಿಗೆ ೪೦ ವರ್ಷಗಳಿಗೆ ಉಚಿತವಾಗಿ ಲೀಸ್‌ಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂಬ ಚರ್ಚೆಯೂ ಸೇರಿಕೊಂಡಿರುವುದು ದುರದೃಷ್ಟಕರ.

Call Now Button