ಮೈಸೂರು: ಸತತ ಅವಕಾಶ ವಂಚನೆಗೆ ಒಳಗಾಗುತ್ತಿರುವ ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯ ವೇಳೆ ಅವಕಾಶ ಕಲ್ಪಿಸಿ ಅಲ್ಪಸಂಖ್ಯಾತರಿಗೆ ಸ್ಥಾನಮಾನ ಕಲ್ಪಿಸಬೇಕೆಂದು ಮೈಸೂರಿನ ಮೌಲ್ವಿಗಳು ಒಕ್ಕೋರಲಿನ ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಹೊಟೇಲ್ವೊಂದರಲ್ಲಿಂದು ಮೌಲ್ವಿಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಮುಸ್ಲಿಂ ಧರ್ಮಗುರುಗಳು, ಹಲವು ವರ್ಷಗಳಿಂದ ಜನಪರ ಸೇವೆ ಹಾಗೂ ರಾಜಕೀಯ ಅನುಭವ ಹೊಂದಿರುವ ತನ್ವೀರ್ ಸೇಠ್ ಅವರು ಸಮುದಾಯದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಪ್ರತಿ ಬಾರಿಯೂ ತನ್ವಿರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪುತ್ತಿದೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ನೋವುಂಟಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬರಲು ಮುಸ್ಲಿಂ ಸಮುದಾಯಗಳು ಒಕ್ಕೋರಲಿನ ಬೆಂಬಲ ನೀಡಿವೆ. ಎಲ್ಲ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷದ ಪರ ಅಲ್ಪಸಂಖ್ಯಾತರು ನಿಂತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿತ್ವವನ್ನು ಪರಿಗಣಿಸಿ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಕುರಿತು ಸರ್ಕಾರ ಮತ್ತು ಪಕ್ಷದ ನಾಯಕತ್ವವು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ಮೌಲ್ವಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೌಲಾನಾ ಸಾದಿಕ್, ಮೌಲಾನಾ ನಸೀರ್ ಖಾನ್, ಮೌಲಾನಾ ಅಸ್ಲಂ ರಝಾ ಖುರೇಶಿ, ಜಾಫರ್ ಅಲಿ ಖಾನ್, ಎಂ.ಡಿ. ಮುಜಮ್ಮಿಲ್, ಜಾಕಿರ್ ಖಾನ್, ಸಿರಾಜುದ್ದೀನ್, ಮೌಲಾನಾ ಎಂ.ಡಿ. ಇರ್ಫಾನ್, ಸಯ್ಯದ್ ಅನಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


