Online News in ಕನ್ನಡ

ಜ.30ರಂದು ಮೈಸೂರಿನಲ್ಲಿ ಮಹಾತ್ಮ ಗಾಂಧಿ ಸ್ಮರಣಾರ್ಥ ಸೌಹಾರ್ದ ನಡಿಗೆ

ಮೈಸೂರು: ಮಹಾತ್ಮ ಗಾಂಧಿಯವರು ಹುತಾತ್ಮರಾದ ಜನವರಿ 30ರಂದು ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಸಂತ ಫಿಲೋಮಿನಾಸ್‌ ಚರ್ಚ್‌ನಿಂದ ಸೌರ್ಹಾದ ನಡಿಗೆ ಆರಂಭಗೊಂಡು ಅಜಾಮ್‌ ಪಾರ್ಕ್‌, ಅಶೋಕ ರಸ್ತೆ ಮೂಲಕ ಟೌನ್‌ ಹಾಲ್‌ನ ಅಂಬೇಡ್ಕರ್‌ ಪ್ರತಿಮೆವರೆಗೆ ಪಾದಯಾತ್ರೆ ನಡೆಯಲಿದ್ದು ಚಿಕ್ಕಗಡಿಯಾರದಲ್ಲಿ ಸೌಹಾರ್ದ ಗೀತಗಾಯನ, ಭಾಷಣ ನಡೆಯಲಿದೆ.
ಪ್ರಗತಿಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಕೇಂದ್ರ ಕಾರ್ಮಿಕ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ದಲಿತರ ವಿದ್ಯಾರ್ಥಿಗಳ ಒಕ್ಕೂಟ, ಸಂಶೋಧಕರ ಸಂಘ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಭಾರತ ವಿದ್ಯಾರ್ಥಿ ಫೆಡರೇಷನ್‌, ಇನ್ಸಾಫ್‌, ಕನ್ನಡ ಪರ ಸಂಘಟನೆಗಳು ಮತ್ತು ಹವ್ಯಾಸಿ ರಂಗ ತಂಡಗಳು ಭಾಗವಹಿಸಲಿವೆ.
ಇಂದು ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಸೌಹಾರ್ದ ಕರ್ನಾಟಕದದ ಸಂಯೋಜಕಪ್ರೊ. ಕಾಳಚನ್ನೇಗೌಡ, ಜಾತಿ ಮತಗಳ ಹೆಸರಿನಲ್ಲಿ ಸಮಾಜದ ಶಾಂತಿ ಸಹಭಾಳ್ವೆಯನ್ನು ಕದಡುವ ಸಂಕುಚಿತವಾದಿ ಛಿದ್ರಕಾರಿ ಶಕ್ತಿಗಳು ಸಮಾಜದಲ್ಲಿ ಮೇಲುಗೈ ಸಾಧಿಸುತ್ತಿರುವುದು ಆಂತಕ ಮೂಡಿಸಿದೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದಂತೆ ಕರ್ನಾಟಕ ಮತ್ತು ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ನಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿದೆ. ಐಕ್ಯತೆಗಾಗಿ, ಕೋಮು ಸೌಹಾರ್ದದ ಮೌಲ್ಯಗಳಿಗಾಗಿ ಜೀವ ತೆತ್ತವರು ಮಹಾತ್ಮ ಗಾಂಧಿ. ಈ ಹಿನ್ನಲ್ಲೆಯಲ್ಲಿ ಸೌಹಾರ್ದ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಸಂಯೋಜಕರಾದ ಜಗದೀಶ್‌ ಸೂರ್ಯ, ಸವಿತ ಪ. ಮಲ್ಲೇಶ್‌, ನೂರ್‌ ಮರ್ಚೆಂಟ್‌ ವರಳ್ಳಿ ಆನಂದ್‌, ಗಜೇಂದ್ರ ಚಿನ್ನಸ್ವಾಮಿ, ಡಿ. ಅಭಿ ಮತ್ತು ಇತರರು ಹಾಜರಿದ್ದರು.

Call Now Button