ಮೈಸೂರು: 2026 ಹೊಸ ವರ್ಷವು ನಮ್ಮಲ್ಲಿ ಹೊಸ ಹುರುಪು ಮತ್ತು ನವೋಲ್ಲಾಸವನ್ನು ತರಬಲ್ಲದು. ಆದರೆ ಇದಕ್ಕಾಗಿ ನಮ್ಮಲ್ಲಿ ಆಂತರಿಕವಾಗಿ ಹಲವು ಬದಲಾವಣೆ ಗಳನ್ನೂ ಮಾಡಿಕೊಳ್ಳಬೇಕು ಎಂದು ಈ ವಿವಿ ಯ ಮೈಸೂರು ಉಪವಲಯದ ಮುಖ್ಯ ಸಂಚಾಲಕರಾದ ಬಿಕೆ ಲಕ್ಷ್ಮೀಜಿ ಕರೆಕೊಟ್ಟರು. ಇಂದು ಅವರು ಯಾದವಗಿರಿಯ ಸೇವಾ ಕೇಂದ್ರದಲ್ಲಿ ಹೊಸವರ್ಷಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ವರ್ಷ ನಾವೆಲ್ಲರೂ ಮನಸ್ಸನ್ನು ಸದಾ ಶಾಂತವಾಗಿಡಲು ಪ್ರಯತ್ನಿಸಬೇಕು. ಅದಕ್ಕಾಗಿ ನಮ್ಮ ಸಂಕಲ್ಪ, ಮಾತು ಮತ್ತು ಕರ್ಮದ ಬಗ್ಗೆ ಗಮನವಿಡಬೇಕು. ನಮ್ಮ ಕಣ್ಣುಗಳೂ ಸಹಿತ ಮೋಸ ಮಾಡುತ್ತವೆ ಎಂಬುದನ್ನು ಮರೆಯಬಾರದು. ಮುಖ್ಯವಾಗಿ ನಮ್ಮ ಆಲೋಚನೆಗಳು ಎಲ್ಲರಿಗೂ ತೃಪ್ತಿ ನೀಡುವಂತಿರಬೇಕು.

ಜೊತೆಗೆ ಗೃಹಸ್ಥರ ಮನೆಗಳಲ್ಲಿ ಯಾವುದೇ ಕಾರಣಕ್ಕೂ ಪರಸ್ಪರ ಸಂಬಂಧಗಳನ್ನು ಕೆಡಿಸಿಕೊಳ್ಳದೇ ಅನ್ಯೋನ್ಯತೆಯಿಂದ ಬದುಕಬೇಕು. ಅದಕ್ಕಾಗಿ ಸೂಕ್ತವಾದ ರೀತಿಯಲ್ಲಿ ವ್ಯವಹರಿಸಲು ಗಮನವಿಡಬೇಕು. ಹಾಗೆಯೇ ಮಕ್ಕಳನ್ನು ಬಹು ಪ್ರೀತಿಯಿಂದ ಕಾಣುತ್ತಾ ಅವರಲ್ಲಿ ಉತ್ತಮ ಗುಣಗಳನ್ನು ರೂಪಿಸಲು ಬೇಕಾದ ವಾತಾವರಣವನ್ನು ಮನೆಯಲ್ಲಿ ರೂಪಿಸಬೇಕು.
ಜೊತೆಗೆ ಕೆಲಸ ಮಾಡುವ ಸ್ಥಳದಲ್ಲಿ ಕೂಡ ಸಹೋದ್ಯೋಗಿಗಳ ಜೊತೆಯಲ್ಲಿ ಗೌರವದಿಂದ ನಡೆದುಕೊಳ್ಳಬೇಕು ಮತ್ತು ಕೆಲಸದ ವಾತಾವರಣದಲ್ಲಿ ಕೋಪ, ದ್ವೇಷ, ಈರ್ಷ್ಶ್ಯೆ ಮುಂತಾದ ನಕಾರಾತ್ಮಕ ಗುಣಗಳು ಕಾಣದಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.


