ಮೈಸೂರು: ಮೈಸೂರು ನಗರದ ಎನ್. ಆರ್. ಮೊಹಲ್ಲಾದ ಸೆಸ್ಕಾಂನ ಕಾರ್ಯಪಾಲಕ ಇಂಜಿನಿಯರ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಜಾತಿ ನಿಂದನೆ ಆರೋಪದ ಮೇಲೆ ವಿದ್ಯುತ್ ಗುತ್ತಿಗೆದಾರ ಆರ್. ಶ್ರೀಪಾಲ್ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.
ನಗರದ ಎನ್. ಆರ್.ಮೊಹಲ್ಲ ಸೆಸ್ಕಾಂ ವಿಭಾಗದಲ್ಲಿ ಕಾರ್ಯಪಾಲಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಬಿ.ಅನಿತಾ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರಿಂದ ಈ ಕ್ರಮ ಜರುಗಿಸಲಾಗಿದೆ. ಆರೋಪಿ ಶ್ರೀಪಾಲ್ ಅನೇಕ ವರ್ಷಗಳಿಂದ ಗುತ್ತಿಗೆದಾರನಾಗಿದ್ದು ತನ್ನೆಲ್ಲ ಅಕ್ರಮ ಕೆಲಸಗಳಿಗೆ ಸಹಕರಿಸದ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುವುದು, ರಾಜಕೀಯ ಪ್ರಭಾವ ಬಳಸಿ ಬೆದರಿಸುವುದು, ವಿಶೇಷವಾಗಿ ಮಹಿಳಾ ಸಿಬ್ಬಂದಿಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಸೆಸ್ಕ್ ವಲಯದಲ್ಲಿ ಕೇಳಿಬಂದಿದೆ.
ಘಟನೆ ವಿವರ:
ಶ್ರೀಪಾಲ್.ಆರ್ ಎಂಬ ವಿದ್ಯುತ್ ಗುತ್ತಿಗೆದಾರ ಪದೇ ಪದೇ ನನ್ನ ಬಳಿ ಬಂದು ಆಕ್ರಮವಾಗಿ ಕಾನೂನು ಬಾಹಿರ ಸರ್ಕಾರಿ ಕೆಲಸವನ್ನು ತನ್ನ ಪರವಾಗಿ ಮಾಡುವಂತೆ ಒತ್ತಡ ಹಾಕುತ್ತಿದ್ದ. ಇದಕ್ಕೆ ಪ್ರತಿಯಾಗಿ ನಾನು ಅವರ ಆಕ್ರಮ ಬೇಡಿಕೆಗಳನ್ನು ತಿರಸ್ಕರಿಸಿದ ಕಾರಣ ಅವರು ನನ್ನ ಮೇಲೆ ಕಛೇರಿ ಸಮಯದಲ್ಲಿ ಜಗಳ ತೆಗೆದು ಇಲ್ಲ ಸಲ್ಲದ ಆರೋಪ ಮಾಡಿ ತೆಜೋವಧೆ ಮಾಡಿ ನಿಂದಿಸಿದ ಹಿನ್ನೆಲೆಯಲ್ಲಿ ಡಿ.೧೧ರಂದು ಕಾರ್ಯಪಾಲಕ ಇಂಜಿನಿಯರ್ ಅನಿತಾ ಅವರು ಮೈಸೂರು ನಗರ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮೊ.ನಂ. 11/25 ರಂತೆ ಪ್ರಕರಣ ದಾಖಲಿಸಿದರು.


