Online News in ಕನ್ನಡ

ಡಿಸಿಎಂ ಡಿ.ಕೆ.ಶಿವಕುಮಾರ್ – ಶಾಸಕ ಮುನಿರತ್ನ ನಡುವೆ ಸದನದಲ್ಲಿ ಮೆಟ್ರೋ ಜಟಾಪಟಿ

ಬೆಂಗಳೂರು- ಮೆಟ್ರೋ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿಯ ಶಾಸಕ ಮುನಿರತ್ನ ಅವರ ನಡುವೆ ಜಟಾಪಟಿ ನಡೆಯಿತು.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಮುನಿರತ್ನ ಅವರು, ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ರೈಲು ಮಾರ್ಗ ನಡುವೆ ಬೆಟ್ಟದ ಹಲಸೂರು ಬಳಿ ನಿಲ್ದಾಣ ನಿರ್ಮಾಣದ ಅಡ್ಡಿ ಆತಂಕಗಳ ಬಗ್ಗೆ ಗಮನ ಸೆಳೆದರು.
ಚರ್ಚೆ ಮುಂದುವರೆಸಿದ ಮುನಿರತ್ನ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಕಾರ್ಯ ಸಾಧನೆಗಳ ಬಗ್ಗೆ ನಾನು ವಿವರಿಸಬೇಕಿದೆ, ಇತ್ತೀಚೆಗೆ ಪ್ರಧಾನಿಯವರು ಬೆಂಗಳೂರಿಗೆ ಬಂದಾಗ 1.5 ಲಕ್ಷ ಕೋಟಿ ರೂ.ಗಳ ವಿಶೇಷ ಅನುದಾನ ನೀಡುವಂತೆ ಡಿ.ಕೆ. ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ. ಅದರಲ್ಲಿ ಸುರಂಗ ಮಾರ್ಗಕ್ಕೆ 41,000 ಕೋಟಿ, ಎಲಿವೇಟೆಡ್‌ ರಸ್ತೆಗೆ 18000 ಕೋಟಿ, ಪೆರಿಫೆರಲ್‌ ರಸ್ತೆಗೆ 27 ಸಾವಿರ ಕೋಟಿ ರೂ. ಘನತಾಜ್ಯ ನಿರ್ವಹಣೆಗೆ 3000 ಕೋಟಿ ರೂ. ರಾಜಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 3000 ಕೋಟಿ ರೂ. ಕೇಳಿದ್ದಾರೆ. ರಾಜ ಕಾಲುವೆ ಪಕ್ಕ ರಸ್ತೆ ನಿರ್ಮಿಸುವುದು ದೇಶದ ಇತಿಹಾಸದಲ್ಲೇ ಹೊಸದು ಎಂದು ಹೇಳುತ್ತಿದ್ದಂತೆ, ಮಧ್ಯಪ್ರವೇಶಿಸಿದ ಡಿ.ಕೆ. ಶಿವಕುಮಾರ್‌ ಅವರು, ಶಾಸಕ ಮುನಿರತ್ನ ತಾವು ಕೇಳಿರುವ ಪ್ರಶ್ನೆಗಳಿಗೆ ಸೀಮಿತವಾಗಿ ಚರ್ಚೆ ಮಾಡಿದರೆ ಸಾಕು. ಮಿಕ್ಕೆಲ್ಲ ವಿಚಾರಗಳು ಅನಗತ್ಯ ಎಂದು ಎಚ್ಚರಿಕೆ ನೀಡಿದರು.
ಪ್ರಶ್ನೆಗೆ ಮರಳಿದ ಮುನಿರತ್ನ, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮೆಟ್ರೋ ರೈಲ್ವೆ ಮಾರ್ಗದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಅದರಲ್ಲಿ ಒಂದೂವರೆ ಕಿ.ೕಮೀ. ಅಂತರದಲ್ಲೂ ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ವಿಮಾನನಿಲ್ದಾಣ ಮಾರ್ಗದಲ್ಲಿ ಒಂಬತ್ತು ಕಿ.ಮೀ. ಅಂತರದಲ್ಲಿ ಯಾವುದೇ ನಿಲ್ದಾಣ ಇಲ್ಲ, ಬೆಟ್ಟದ ಅಲಸೂರು ಜಾಗದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಮುಂದೆ ಬಂದಿದ್ದು, ಈಗ ಅವರು ಹಿಂದೆ ಸರಿದಿದ್ದಾರೆ.ಡಿ.ಕೆ. ಶಿವಕುಮಾರ್‌ ಅವರು ಒಂದು ಫೋನ್‌ ಕಾಲ್‌ ಮಾಡಿ ಹೇಳಿದ್ರೆ ಎಂಬೆಸಿ ಸಂಸ್ಥೆಯವರು ಮೆಟ್ರೋ ನಿಲ್ದಾಣ ನಿರ್ಮಿಸುತ್ತಾರೆ. ಡಿ.ಕೆ. ಶಿವಕುಮಾರ್‌ ಅವರ ಮಾತಿಗೆ ಯಾವ ಬಿಲ್ಡರ್‌ಗಳು ಎದುರಾಡುವುದಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌ ಅವರು, ಸಾಮಾಜಿಕ ಹೊಣೆಗಾರಿಕೆ ನಿಯಮದಡಿ ಮೆಟ್ರೋ ನಿಲ್ದಾಣಗಳನ್ನು ಖಾಸಗಿಯವರು ನಿರ್ಮಿಸಿ ಕೊಡುತ್ತಿದ್ದಾರೆ. ಇನ್ಫೋಸಿಸ್‌‍ 200 ಕೋಟಿಯನ್ನು ಈ ಕಾರ್ಯಕ್ಕಾಗಿ ನೀಡಿದೆ. ಡೆಲ್ಟಾ ಸಂಸ್ಥೆ ಕೂಡ ನಿಲ್ದಾಣಕ್ಕೆ ಆ ಸಂಸ್ಥೆಯವರ ಹೆಸರನ್ನೇ ನಾಮಕರಣ ಮಾಡಲಾಗಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಕೆಯನ್ನು ಪ್ರಧಾನಿಯವರೇ ಶ್ಲಾಘಿಸಿದ್ದಾರೆ ಎಂದರು.
ವಿಮಾನ ನಿಲ್ದಾಣದ ರಸ್ತೆ ಬಳಿಯಲ್ಲಿ ಮುನಿರತ್ನ ಅವರ ಎಪ್ಪತೈದು ಎಕರೆ ಜಮೀನಿದೆ ತಮ ಜಾಗದ ಬಳಿ ಮೆಟ್ರೋ ನಿಲ್ದಾಣ ಬೇಕು ಎಂಬುದು ಅವರ ಸ್ವಾರ್ಥ, ನನಗೂ ಸ್ವಾರ್ಥ ಇರುತ್ತದೆ. ಆದರೆ ಸರ್ಕಾರ ಇಂತಹ ವಿಚಾರಗಳನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಮೆಟ್ರೋ ನಿಲ್ದಾಣಕ್ಕಾಗಿ ಸಚಿವ ಕೃಷ್ಣ ಬೈರೇಗೌಡ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಲ್ಲಿ ವಿಮಾ ಮೆಟ್ರೋ ನಿಲ್ದಾಣ ಬೇಕು ಬೇಡವೋ ಅಷ್ಟು ಮಾತ್ರ ಹೇಳಿ ನನ್ನ ಜಮೀನು 20 ಎಕರೆ ಇದೆಯೋ? 75 ಎಕರೆ ಇದೆಯೋ? ಅದು ಅನಗತ್ಯ ಎಂದರು .
ಇದಕ್ಕೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಚಿವ ಕೃಷ್ಣ ಬೈರೇಗೌಡ ತಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಏನು ಹೇಳಬೇಕು ಅದನ್ನು ಹೇಳಿದ್ದಾರೆ. ಅವರದು ಪಬ್ಲಿಕ್‌, ನಿಮದು ಪ್ರವೇಟ್‌ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಆ ಭಾಗದಲ್ಲಿ 250 ಎಕರೆ ಜಾಗಕ್ಕೆ ಒಪ್ಪಂದ ಮಾಡಿಕೊಂಡಿದ್ದರು. 1040 ಕೋಟಿ ರೂ. ವೆಚ್ಚದ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ 120 ಕೋಟಿ ರೂ. ನೀಡುವುದಾಗಿ ಮುಂದೆ ಬಂದು ಒಂದು ಕೋಟಿ ರೂ.ಗಳನ್ನು ಪಾವತಿಸಿದ್ದಾರೆ.
ಆದರೆ ಜಮೀನು ಅವರಿಗೆ ಬೇಕಾದ ಕಾರಣಕ್ಕೆ ಮೆಟ್ರೋ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ. ಮುನಿರತ್ನ ಅವರೇ ಅಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸಿ ಕೊಡಲಿ. ಸರ್ಕಾರ ಮುನಿರತ್ನ ಅಂಡ್‌ ಅಸೋಸಿಯೇಟ್‌ ಎಂದು ನಿಲ್ದಾಣಕ್ಕೆ ನಾಮಕರಣ ಮಾಡುತ್ತದೆ ಎಂದು ತಿರುಗೇಟು ನೀಡಿದರು. ಇದು ಕೆಲಕಾಲ ಚರ್ಚೆಗೆ ಗ್ರಾಸವಾಯಿತು.

Call Now Button