ಮೈಸೂರು: ಖ್ಯಾತ ಬರಹಗಾರ ಹನೂರು ಚೆನ್ನಪ್ಪ ವಿರಚಿತ, ದಲಿತ ಸಂವೇದನೆಯ ʻಬೆಲ್ಲದ ದೋಣಿʼ ನಾಟಕವು ಭಾರತವನ್ನು ದಾಟಿ ಅಮೇರಿಕಾದ ಕ್ಯಾಲಿಫೋರ್ನಿಯಾ ತಲುಪಿದೆ. ಈ ನಾಟಕದ ಪ್ರದರ್ಶನ ಅಕ್ಟೋಬರ್ ೧೧ರಂದು ಅನುವಾಸಿ ಭಾರತೀಯ ಕಲಾವಿದರಿಂದ ಪ್ರದರ್ಶನಗೊಳ್ಳುತ್ತಿದೆ. ಇದರ ಪೋಸ್ಟರ್ ಇಂದು ಮೈಸೂರಿನಲ್ಲಿ ಬಿಡುಗಡೆಗೊಳಿಸಲಾಯಿತು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬೆಲ್ಲದ ದೋಣಿ ಪೋಸ್ಟರನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಹಿರಿಯ ಸಾಹಿತಿ ದೇವನೂರು ಮಹದೇವರ ನಂತರ ಚಾಮರಾಜನಗರದ ಭಾಷಾ ಸೊಗಡಿನಲ್ಲಿ ದಲಿತರ ಸಂವೇದನೆಯನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿರುವ ಹನೂರು ಚೆನ್ನಪ್ಪ ಅವರು ಓರ್ವ ಶ್ರೇಷ್ಠ ಬರಹಗಾರ. ಅವರು ಮೂರು ಕೃತಿಗಳನ್ನು ರಚಿಸಿದ್ದರೂ, ಅವು ನೂರು ಕೃತಿಗಳಿಗೆ ಸಮಾನವಾಗಿವೆ. ಅವರ ಅನ್ನ, ಬೆಲ್ಲದ ದೋಣಿ, ಕಬ್ಬಿಣದ ಕುದುರೆ ಕೃತಿಗಳು ಶ್ರೇಷ್ಠ ಕೃತಿಗಳ ಸಾಲಿನಲ್ಲಿ ನಿಲ್ಲುತ್ತವೆ ಎಂದು ತಿಳಿಸಿದರು.
ಆನೆಯನ್ನು ಪ್ರೀತಿಸುವ ಜನ ಅಸ್ಪೃಶ್ಯರನ್ನು ದ್ವೇಷಿಸುತ್ತಾರೆ. ಈ ದೇಶದಲ್ಲಿ ಪ್ರಾಣಿಗಳಿಗೆ ಸುತ್ತಿರುವ ಮಾನ್ಯತೆ, ಜಾತಿಯ ಕಾರಣಕ್ಕೆ ಮನುಷ್ಯರಿಗೆ ಸಿಗುತ್ತಿಲ್ಲ. ಇಂದಿಗೂ ಜಾತಿಯ ಕಾರಣಕ್ಕೆ ದಲಿತ ಶಾಲಾ ಮಕ್ಕಳಿಗೆ ಅನ್ನ ಹಾಕದ ಘಟನೆ, ಗಣೇಶನ ದೇವಸ್ಥಾನ ಪ್ರವೇಶಿಸಿದಕ್ಕೆ ದಲಿತರ ಮೇಲೆ ಹಲ್ಲೆ ಪ್ರಕರಣ ನಡೆದಿದೆ. ದಲಿತರು ಬೆಲ್ಲದ ದೋಣಿಯ ಪಯಣವನ್ನು ನಿಲ್ಲಿಸಿ, ವೈಚಾರಿಕ ನೆಲೆಯಲ್ಲಿ ಸಾಗಬೇಕು. ಸಂವಿಧಾನ ಮತ್ತು ಅಂಬೇಡ್ಕರ್ ಚಿಂತನೆಗಳು ಮಾತ್ರ ದಲಿತರನ್ನು ವಿಮೋಚನೆಗೊಳಿಸಲು ಸಾಧ್ಯ.
– ಕೆ.ದೀಪಕ್, ಅಧ್ಯಕ್ಷ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ.

ಡಾ. ಅಂಬೇಡ್ಕರ್ ಅವರ ಸಮ ಸಮಾಜ ನಿರ್ಮಾಣದ ಕನಸ್ಸು ಇಂದಿಗೂ ನನಸಾಗಿಲ್ಲ. ದಲಿತರು ಮೇಲ್ವರ್ಗದ ಜನರಿಂದ ಗೌರವ, ಮನ್ನಣೆಯನ್ನು ಪಡೆಯಲು ಕಾಣುವ ಕನಸ್ಸನ್ನು ಹೊತ್ತು ಸಾಗುವ ಬೆಲ್ಲದ ದೋಣಿ ನಾಟಕ ಅಂಬೇಡ್ಕರ್ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ. ಈ ನಾಟಕ ಕರ್ನಾಟಕದಿಂದ ಅಮೇರಿಕಾದ ಕ್ಯಾಲಿಫೋರ್ನಿಯಾ ತಲುಪಿರುವುದು ನಿಜಕ್ಕೂ ಸಂತಸದ ಸಂಗತಿ ಮತ್ತು ದೊಡ್ಡ ಸಾಧನೆ ಎಂದು ಬಣ್ಣಿಸಿದರು.
ನಾಟಕದ ರಚನಾಕಾರ ಹನೂರು ಚೆನ್ನಪ್ಪ ಮಾತನಾಡಿ, ನನ್ನ ಸಹಜ ಬರಹಗಳು ಸಹಜವಾಗಿಯೇ ಜನರನ್ನು ತಲುಪಿದಿದೆ. ಇಲ್ಲಿ ಘಟಿಸುತ್ತಿರುವ ಪ್ರತಿಯೊಂದು ಸನ್ನಿವೇಶವೂ ತನ್ನಷ್ಟಕ್ಕೆ ತಾನೇ ನಡೆಯುತ್ತಿದೆಯೇ ವಿನಃ ಇದರಲ್ಲಿ ಯಾರ ಒತ್ತಾಸೆಯೂ ಇಲ್ಲ ಎಂದು ಹೇಳುತ್ತಾ, ತಮ್ಮ ಕೃತಿಗಳ ಸಾರ್ಥಕತೆಗೆ ಶ್ರಮಿಸಿದ ತಮ್ಮ ನಡುವೆ ಇರುವ ಸ್ನೇಹಿತರನ್ನು ಸ್ಮರಿಸಿದರು.
ಅಕ್ಟೋಬರ್ ೧೧ಕ್ಕೆ ಪ್ರದರ್ಶನ:
ವಿನಯ್ ಭಾರದ್ವಜ್ ನಿರ್ದೇಶನದಲ್ಲಿ ಪ್ರದರ್ಶನ ಕಾಣುತ್ತಿರುವ ಬೆಲ್ಲದ ದೋಣಿ ನಾಟಕದಲ್ಲಿ ಧನಂಜಯ ಕೆಂಗೆಯ್ಯ, ಮಧು ಕೃಷ್ಣಮೂರ್ತಿ, ರಮ್ಯ ವೆಂಕಟೇಶ್, ರಮ್ಯಾ ಶ್ರೀ ಕೇಶವನ್, ರಶ್ಮಿ ಭಟ್, ಶರತ್ ರಿಗ್ವೇದಿ, ಸ್ಮೇಜ ಪ್ರಸಾದ್, ಸುಮಂತ್ ಶಾಂತರಾಂ ಅಭಿನಯಿಸಿದ್ದಾರೆ. ಸಂಗೀತ ಅವಿನಾಶ್ ಪ್ರರಬ್, ಕೇದರ್ ದೇಶಪಾಂಡೆ, ಶ್ರೆಯಾ ರವೀಂದ್ರ, ಬೆಳಕು ಗೌವರ್ ಶೆಟ್, ಸಂಗೀತ ಕೇದರ್ ದೇಶಪಾಂಡೆ, ಪ್ರಚಾರ ಮಾನಸ ಗಿರೀಶ್, ನಿರ್ಮಾಣ ಪ್ರೇಮಾ ಆನಂದ್, ಸಮರ್ಥ್ ಕೆ.ಎನ್, ಕಲಾ ನಿರ್ದೇಶನದ ಹೊಣೆಯನ್ನು ಸುಜಯ್ ರಾಮಯ್ಯ ಅವರದ್ದು.
ಮಾಧ್ಯಮಗೋಷ್ಟಿಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ನಾಟಕದ ಮೂಲ ನಿರ್ದೇಶಕ ರಾಬಿನ್ ಮೊದಲಾದವರು ಹಾಜರಿದ್ದರು.


