Online News in ಕನ್ನಡ

ಸ್ವಚ್ಛ ನಗರಿ, ಮೈಸೂರಿಗೆ ಗರಿ: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ

ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಜತೆ ಪ್ರಗತಿ ಸಭೆ
ಬೆಂಗಳೂರು: ಮೈಸೂರು ನಗರದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಸ್ವಚ್ಛತೆಗೆ ಆಧ್ಯತೆ ನೀಡಿ ʻಸ್ವಚ್ಛ ನಗರಿʼ ಎಂಬ ಹೆಗ್ಗಳಿಕೆಯನ್ನು ಮರು ಸ್ಥಾಪಿಸಬೇಕೆಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮೈಸೂರು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು, ಪರಿಶೀಲನೆ ನಡೆಸಿದರು.
ಮೈಸೂರು ನಗರವು ಸ್ವಚ್ಛ ನಗರ ಎಂಬ ಖ್ಯಾತಿ ಗಳಿಸಿದೆ, ಈ ಮನ್ನಣೆ ಉಳಿಸಿಕೊಳ್ಳಲು ನಗರದ ಸ್ವಚ್ಛತೆಗೆ ಗಮನ ಹರಿಸಬೇಕು. ಯುಜಿಡಿ ಕಾಮಗಾರಿಗಳನ್ನು ಸಮರ್ಪಕವಾಗಿ ನಡೆಸಬೇಕು. ಕಸ ವಿಂಗಡಣೆ ಸರಿಯಾಗಿ ನಡೆಯಬೇಕು. ದಸರಾ ಸಂದರ್ಭದಲ್ಲಿ ದೇಶ ವಿದೇಶದಿಂದ ಪ್ರವಾಸಿಗರು ಬರುತ್ತಾರೆ, ಮೈಸೂರು ನಗರದ ಸ್ವಚ್ಚತೆ, ಅವರ ಗಮನ ಸೆಳೆಯುತ್ತದೆ ಎಂದರು.

ಮಹಾನಗರ ಪಾಲಿಕೆಯ ಮಳಿಗೆಗಳ ಬಾಡಿಗೆ ದರ ಹೆಚ್ಚಿಸಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸುಮಾರು 10 ಪಟ್ಟು ಹೆಚ್ಚು ದರವನ್ನು ಒಮ್ಮೆಗೆ ಹೆಚ್ಚಿಸಿದರೆ ತುಂಬಾ ಹೊರೆಯಾಗುತ್ತದೆ. ಇದನ್ನು ಕಡಿಮೆ ಮಾಡುವ ಬಗ್ಗೆ ಪರಿಶೀಲಿಸಬೇಕು ಎಂದು ಸಚಿವರು ತಿಳಿಸಿದರು. ಸುಮಾರು 30 ವರ್ಷಗಳಿಂದ ದರ ಹೆಚ್ಚಳ ಮಾಡಿಲ್ಲ. ಈಗ ಮಾಡಿರುವ ದರವು ಪ್ರಸಕ್ತ ಸನ್ನಿವೇಶಕ್ಕೆ ಕಡಿಮೆ ಇದೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿರುವ ದರದ ಶೇ.40 ರಷ್ಟು ಮಾತ್ರ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ ಕೆರೆಗಳಿಗೆ ಕೊಳಚೆ ನೀರು ಬರುತ್ತಿದೆ ಎಂಬ ಮಾತುಗಳಿವೆ. ಕೊಳಚೆ ನೀರು ಕೆರೆಗಳಿಗೆ ಹೋಗದಂತೆ ಮಾರ್ಗ ಬದಲಿಸಬೇಕು ಅಥವಾ ನೀರನ್ನು ಸಂಸ್ಕರಿಸಬೇಕು ಎಂದು ಹೇಳಿದರು.
ಪೌರಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಗಬೇಕು. ಪೌರ ಕಾರ್ಮಿಕರ ಸಂಘದ ಸಭೆಯನ್ನು ಇತ್ತೀಚೆಗೆ ನಡೆಸಲಾಯಿತು. ಸಭೆಯಲ್ಲಿ ಪೌರ ಕಾರ್ಮಿಕರ ಹಲವಾರು ಸಮಸ್ಯೆಗಳನ್ನು ತಿಳಿಸಿದ್ದಾರೆ. ಶೇ24.1ರ ಅನುದಾನದಲ್ಲಿ ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಡಬೇಕು. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅವರ ಶಾಲಾ ಪ್ರವೇಶ ಶುಲ್ಕ ಮರು ಪಾವತಿಗೆ ಉಪಯೋಗಿಸಬೇಕು ಎಂದರು.
ಶೇ.24.1ರ ಅನುದಾನದಲ್ಲಿ ಶೇ. 20ರಷ್ಟು ಅನುದಾನವನ್ನು ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ವ್ಯಯಿಸಲಾಗುತ್ತಿದೆ. ಉಳಿದ ಅನುದಾನದಲ್ಲಿ ಶೇ. 60 ರಷ್ಟು ಸಿವಿಲ್‌ ಕಾಮಗಾರಿಗೆ, ಶೇ. 40 ರಷ್ಟು ಅನುದಾನವನ್ನು ವೈಯಕ್ತಿಕ ಸೌಲಭ್ಯಕ್ಕೆ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವೈಟ್ ಟ್ಯಾಪಿಂಗ್ ಹಾಗೂ ಆಸ್ಫಾಲ್ಟ್ ರಸ್ತೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಶೇ. 40 ರಷ್ಟು ವೈಟ್ ಟ್ಯಾಪಿಂಗ್ ಹಾಗೂ ಶೇ.60 ಆಸ್ಪಾಲ್ಟ್ ರಸ್ತೆ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಬೋಗಾದಿ ರಸ್ತೆ, ಮಾನಂದವಾಡಿ ರಸ್ತೆ, ಮತ್ತಿತರ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಆರು ತಿಂಗಳಾದರೂ ಸಭೆ ನಡೆಯುತ್ತಿಲ್ಲ ಎಂಬ ಮಾತಿದೆ. ಸಭೆಗಳು ವಿಳಂಬವಾದರೆ, ಸರಿಯಾದ ಸಮಯಕ್ಕೆ ಸೌಲಭ್ಯಗಳನ್ನು ಕೊಡಲಾಗುವುದಿಲ್ಲ. ಪ್ರತಿ ತಿಂಗಳು ಸಭೆ ನಡೆಯುವಂತೆ ಕ್ರಮವಹಿಸಬೇಕು ಎಂದು ಸಚಿವರು ಹೇಳಿದರು.
ಸಿಎ ನಿವೇಶನಗಳಿಗೆ ನಿಗದಿಪಡಿಸಿರುವ ದರಕ್ಕೆ ಖರೀದಿಸಲು ಯಾರೂ ಒಪ್ಪುತ್ತಿಲ್ಲ. ದರ ಕಡಿಮೆ ಮಾಡಬೇಕು. ನಿವೇಶನಗಳನ್ನು ಹಂಚಿಕೆ ಮಾಡಿಸಿಕೊಂಡು ಮನೆ ನಿರ್ಮಾಣ ಮಾಡದಿರುವ ಪ್ರಕರಣಗಳಲ್ಲಿ ನಿವೇಶನಗಳನ್ನು ವಾಪಸ್ಸು ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ಇದಕ್ಕೆ ಒಂದು ಬಾರಿ ದಂಡ ವಿಧಿಸಿ, ಮತ್ತೊಂದು ಅವಕಾಶ ನೀಡುವ ಬಗ್ಗೆ ಸರ್ಕಾರದಿಂದ ಆದೇಶ ಮಾಡಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದರು.
ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಅಡಿ 158 ಮನೆಗಳು ಪೂರ್ಣಗೊಂಡಿವೆ. ಮನೆಗಳ ಹಂಚಿಕೆ ಕಾರ್ಯಕ್ರಮ ನಿಗದಿಯಾಗಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶೇಕ್‌ ತನ್ವೀರ್‌ ಆಸೀಫ್‌, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಉಪ ಆಯುಕ್ತ ಸೋಮಶೇಖರ್ ಜಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಕೆಯುಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಉಪಸ್ಥಿತರಿದ್ದರು.

Call Now Button