ನವದೆಹಲಿ: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.
ಬಾನು ಮುಷ್ತಾಕ್ ಅವರು ತಮ್ಮ ಸಾಹಿತ್ಯ ಸೇವೆಯ ಮೂಲಕ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದುಕೊಟ್ಟ ಹಿನ್ನೆಲೆಯಲ್ಲಿ ಅವರನ್ನು ಈ ಬಾರಿಯ ದಸರಾ ಉದ್ಘಾಟಕರನ್ನಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿತ್ತು. ಪ್ರಾರಂಭದಿಂದಲೂ ಈ ಬಗ್ಗೆ ವಿರೋಧಗಳು ಕೇಳಿ ಬರುತ್ತಿದ್ದವು. ಬೂಕರ್ ಪ್ರಶಸ್ತಿಯ ಕಾರಣಕ್ಕಾಗಿ ಆಯ್ಕೆ ಮಾಡಿದ್ದರೆ ಇದಕ್ಕೆ ಕಾರಣವಾದ ಅನುವಾದಕಿ ದೀಪಾ ಅವರನ್ನೂ ಆಯ್ಕೆ ಮಾಡಿ, ಇಬ್ಬರೂ ಜಂಟಿಯಾಗಿ ದಸರಾ ಉದ್ಘಾಟನೆ ಮಾಡಲಿ ಎನ್ನುವ ವಾದಗಳೂ ಎದ್ದವು.
ಇದರ ಜೊತೆಗೆ ಬಾನು ಮುಷ್ತಾಕ್ ಅವರಿಗೆ ಹಿಂದೂ ಧರ್ಮ, ಇದರ ಆಚರಣೆಗಳ ಮೇಲೆ ನಂಬಿಕೆ ಇಲ್ಲ. ಇವರು ಹಿಂದೆ ಕನ್ನಡ ಭುವನೇಶ್ವರಿ, ಅರಿಸಿಣ, ಕುಂಕುಮಗಳಿಗೆ ಅಪಮಾನ ಮಾಡಿದ್ದಾರೆ. ಇವರಿಂದ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಲು ಸಾಧ್ಯವೇ..? ಇವರಿಂದ ದಸರಾ ಉದ್ಘಾಟನೆ ಮಾಡಿಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಸೇರಿ ಕೆಲ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದಕ್ಕೆ ಸಂಬಂಧಿಸಿದ ಹಾಗೆ ಕಾನೂನು ಹೋರಾಟಗಳು ಮುಂದುವರಿದು ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಮೂವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಬಾನು ಅವರ ಆಯ್ಕೆಯಿಂದ ಯಾವುದೇ ರೀತಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆಗುವುದಿಲ್ಲ. ಸರ್ಕಾರ ಆಯೋಜನೆ ಮಾಡುವ ಕಾರ್ಯಕ್ರಮವನ್ನು ಬೇರೆ ಧರ್ಮದ ವ್ಯಕ್ತಿಯೊಬ್ಬರು ಉದ್ಘಾಟನೆ ಮಾಡುವುದರಿಂದ ಸಂವಿಧಾನಿಕ ಆಶಯಗಳಿಗೆ ಧಕ್ಕೆ ಆಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿ ಅರ್ಜಿಯನ್ನು ತಿರಸ್ಕಾರ ಮಾಡಿತ್ತು.
ಇದೀಗ ಈ ಅರ್ಜಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಕೋರ್ಟ್ ಹೇಳಿದೆ. ಹೀಗಾಗಿ ಅಲ್ಲಿ ವಾದ ವಿವಾದಗಳನ್ನು ಆಲಿಸಲಿರುವ ಘನ ನ್ಯಾಯಾಲಯ ತನ್ನ ತೀರ್ಪು ಪ್ರಕಟ ಮಾಡಲಿದೆ. ತೀರ್ಪು ಏನೇ ಬಂದರೂ ಇದೊಂದು ಐತಿಹಾಸಿಕ ತೀರ್ಪು ಆಗಿರಲಿದೆ.


