ಮೈಸೂರು: ವಿರೋಧಗಳು ವ್ಯಕ್ತವಾದರೂ ತಾಯಿ ಚಾಮುಂಡೇಶ್ವರಿ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ತಾಯಿಯ ಕೃಪೆಯ ನೆರಳಿನಲ್ಲಿ ನಾನು ನಿಮ್ಮೆದುರು ನಿಂತಿದ್ದೇನೆ. ಇದು ಜೀವನದ ಅತ್ಯಂತ ಗೌರವದ ಸಂಗತಿ ಎಂದು ಸಾಹಿತಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.
ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ದಸರಾ ಉತ್ಸವದ ಉದ್ಘಾಟನೆಯನ್ನು ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದದಿಂದ ಉದ್ಘಾಟನೆ ಮಾಡಿದ್ದೇವೆ. ನನ್ನ ಆಪ್ತ ಗೆಳತಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ಆದರೆ ತಾಯಿ ಚಾಮುಂಡೇಶ್ವರಿ ನನ್ನ ಈ ರೀತಿ ಕರೆಸಿಕೊಳ್ಳುತ್ತಿದ್ದಾಳೆ. ಇದು ನಾಡಿನ ಸಂಸ್ಕೃತಿಯ ಉತ್ಸವ ಹಾಗೂ ಸಮನ್ವಯದ ಮೇಳ. ಈ ನೆಲದಲ್ಲಿ ಹುಟ್ಟಿದ್ದ ಪ್ರತಿಯೊಬ್ಬರಿಗೂ ಇದರ ಅರ್ಹತೆ ಇದೆ ಎಂದರು.

ನನ್ನ ಆಪ್ತ ಸಂಬಂಧಿಯೊಬ್ಬರು ಬೆಳಗೊಳದಲ್ಲಿ ಇದ್ದರು. ಮಹಾರಾಜರ ಅಂಗರಕ್ಷಣೆಯ ತಂಡದಲ್ಲಿ ಸೈನಿಕರಾಗಿದ್ದರು. ಮಹಾರಾಜರು ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಂ ಅವರನ್ನು ನಂಬಿದರು. ಅವರ ಅಂಗಪಡೆಯ ಸದಸ್ಯರನ್ನಾಗಿ ಮಾಡಿಕೊಂಡಿದ್ದರು. ನನ್ನ ಧಾರ್ಮಿಕ ನಂಬಿಕೆಗಳು ಮಾನವೀಯ ದರ್ಶನಗಳನ್ನು ಕಲಿಸಿದೆ. ಎಲ್ಲರನ್ನು ಗೌರವವಿಸುದನ್ನು ಕಳಿಸಿದೆ. ಇದು ಸರ್ವಜನಾಂಗದ ಶಾಂತಿಯ ತೋಟ. ನಾವು ಎಲ್ಲರನ್ನೂ ಗೌರವಿಸೋಣ. ಈ ನೆಲದ ಹೂವುಗಳು ಐಕ್ಯತೆಯಿಂದ ಕೂಡಿರಲಿ. ನಮ್ಮೊಳಗಿನ ದ್ವೇಷ ಅಸಹಿಷ್ಣತೆ ಎಲ್ಲವನ್ನೂ ಹೋಗಲಾಡಿಸಲಿ. ಇಡೀ ಜಗತ್ತಿನ ಮಾನವನ ಕುಲಕ್ಕೆ ಶಾಂತಿ ಸಹನೆ ನ್ಯಾಯದ ದೀಪ ಬೆಳಗಿಸಲಿ. ಇಲ್ಲಿ ಬೇಳಗಿದ ದೀಪ ಜಗತ್ತನ್ನು ಬೆಳಗಲಿ ಎಂದು ಹೇಳಿದರು.
ಇದು ಸರ್ವಜನಾಂಗದ ಶಾಂತಿಯ ತೋಟ. ಪ್ರತಿ ಹೂ ತನ್ನ ತೋಟದಲ್ಲಿ ಅರಳಲಿ. ಒಟ್ಟಿಗೆ ಸೇರಿದಾಗ ಎಲ್ಲರೂ ಒಂದಾಗಲಿ. ನಾವೆಲ್ಲರೂ ಒಂದೇ ಗಗನದ ಪಯಣಿಕರು. ಭೂಮಿ ಯಾರನ್ನು ಹೊರ ತಳ್ಳಲ್ಲ. ಮನುಷ್ಯ ಮಾತ್ರ ಗಡಿ ಹಾಕುತ್ತಾನೆ. ಇದನ್ನು ನಾವೇ ಅಳಿಸಬೇಕು. ಅಸ್ತ್ರಗಳಿಂದಲ್ಲದೇ ನಾವು ಈಗ ಅಕ್ಷರಗಳಿಂದ ಗೆಲ್ಲಬೇಕು ಎಂದು ವಿರೋಧ ಮಾಡಿದವರಿಗೆ ಭಾಷಣದ ಮೂಲಕ ಬಾನು ಮುಷ್ತಾಕ್ ಟಾಂಗ್ ಕೊಟ್ಟರು.


