Online News in ಕನ್ನಡ

ಪ್ರೀತಿ, ಸಹಾನುಭೂತಿಯೇ ಕಾವ್ಯದ ಆದಿ, ಬುನಾದಿ; ಡಾ. ಸಿ. ಪಿ. ಕೃಷ್ಣ ಕುಮಾರ್

ಮೈಸೂರು: ಕಾವ್ಯ ಎಂಬುದು ಸಂಸ್ಕೃತಿಯ ಒಂದು ಅಂಗವಾಗಿದೆ. ಪ್ರೀತಿ ಸಹಾನುಭೂತಿಯೇ ಕಾವ್ಯದ ಆದಿ ಮತ್ತು ಬುನಾದಿಯಾಗಿದ್ದು, ಕಾವ್ಯದಲ್ಲಿ ಪ್ರಪಂಚವೇ ಅಡಗಿದೆ ಎಂದು ಖ್ಯಾತ ಕವಿಗಳಾದ ಡಾ. ಸಿ ಪಿ ಕೃಷ್ಣಕುಮಾರ್ ಅವರು ಹೇಳಿದರು.

ಇಂದು ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ. ಎಂ. ಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಂಚ ಕಾವ್ಯದೌತಣ ಕವಿಗೋಷ್ಠಿಯಲ್ಲಿ ಜರುಗಿದ್ದ ಪ್ರಬುದ್ಧ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾವ್ಯ ಎಂಬುದು ಅರಮನೆ. ಬೆಳಕಿನ ಬೆರಗಿನ ಅರಮನೆ ಅದಕ್ಕೆ ದಾಳಿ ಹಲವು ಹನ್ನೊಂದು. ನಾಲ್ಕು ದಿನದ ಕವಿಗೋಷ್ಠಿಯನ್ನು ನಡೆಸಿ ಇಂದು ಐದನೇ ಯ ಅಂದರೆ ಕೊನೆಯ ಕವಿಗೋಷ್ಠಿಯಾಗಿದ್ದು, ಈ ಕವಿಗೋಷ್ಠಿಯನ್ನು ಪಂಚಕೋಶ ಎಂದು ಕರೆಯಬಹುದಾಗಿದೆ ಎಂದರು.

ಕಾವ್ಯದ ಪರಿಣಿತಿಗೆ ಮುಖ್ಯವಾದದ್ದು ಕಾವ್ಯದ ಔತಣ, ಐದು ಗೋಷ್ಠಿಗಳ ಹೂರಣ, ರಸೋತ್ಪದಾನ, ಆನಂದದ ಜನನ ಇದರಲ್ಲಿ ಉದ್ದಿಷ್ಟವಾಗಿದ್ದು, ಮಾನವತೆಯ ಸಾರ ಲಕ್ಷಣ ಈ ಕವಿಗೋಷ್ಠಿಯಲ್ಲಿ ಸಾರ್ಥಕವಾಗಿದ್ದು, ನಾವೆಲ್ಲರೂ ಮಾನವರಾಗಿದ್ದೇವೆ ಎಂದರು.

ಸಂಸಾರಕ್ಕೆ ಸಂಸ್ಕಾರವನ್ನು ಹೆರೆಯುವುದು ಕಾವ್ಯದ ಧ್ಯೇಯವಾಗಿದೆ. ಕಾವ್ಯ ಆತ್ಮವನ್ನು ರಕ್ಷಿಸುವುದಿಲ್ಲ ಆದರೆ ರಕ್ಷಣೆಗೆ ಯೋಗ್ಯವಾಗಿರುತ್ತದೆ. ಭಾವದ ಮಿಗಿಲಾಗಿ ಅನುಭವವೇ ಕಾವ್ಯದ ಅಂತರಂಗವಾಗಿದ್ದು, ವೈಚಾರಿಕೆ ಅತ್ಯಗತ್ಯ ಎಂದು ತಿಳಿಸಿದರು.

ಕಾವ್ಯಕ್ಕೆ ಭಾಷೆಯೇ ಮೂಲತಃ ಬೆಳಗಾಗಿದ್ದು, ಅದು ಕಾವ್ಯದಲ್ಲಿ ಒಂಬೆಳಗಾಗುತ್ತದೆ. ಸಮಾಜದಲ್ಲಿ ವಿಜೃಂಬಿಸುತ್ತಿರುವ ಮೌಢ್ಯ ಮಂದನೆಯನ್ನು ದೂರ ಮಾಡುತ್ತದೆ. ಕವಿತೆ ಸಮಸ್ಯೆಯನ್ನು ಪರಿಹರಿಸುವ ತಪಸ್ಸಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ಮಾತನಾಡಿದರು.

ಅಕ್ಬರ್ ಎ ಸನದಿ ಅವರು ಹೂವಿನಂತೆ ಹರಳಲಿ ಎಂಬ ಕವನವನ್ನು ಭಾವಗೀತೆಯ ರೀತಿಯಲ್ಲಿ ಹೇಳುವುದರ ಮೂಲಕ ಕೇಳುಗನ ಗಮನ ಸೆಳೆದರು. ನೀಲಾವರ ಸುರೇಂದ್ರ ಅಡಿಗರ ಅವರು ಕನ್ನಡ ಅಭಿಮಾನಿ ಎಂಬ ಕಾವ್ಯ ವಾಚಿಸಿದರು. ನಂದಾ ಪ್ರೇಮ ಕುಮಾರ ಅವರು ಬೇಕೇ ಬೇಕು ಕನ್ನಡ ಶಾಲೆ ಎಂಬ ಕವನವನ್ನು ವಾಚಿಸಿ ಕನ್ನಡ ಶಾಲೆಯ ಮೇಲೆ ಅವರಿಗೆ ಇರುವ ಪ್ರೀತಿಯನ್ನು ವ್ಯಕ್ತ ಪಡಿಸಿದರು.
ಪ್ಲಾವಿಯ ಕ್ಯಾಸ್ಟಲೀನೊ ಅವರು ಕೊಂಕಣಿ ಭಾಷೆಯಲ್ಲಿ ಕೋಣ್ ಕೋಣಾಸ್ ಎಂಬ ಶೀರ್ಷಿಕೆಯ ಕವನ ವಾಚಿಸಿದರು. ಪದ್ಮಿನಿ ನಾಗರಾಜ್ ಅವರು ಹಾರುವೆ ಫಿನಿಕ್ಸ್ ನಂತೆ ಎಂಬ ಶೀರ್ಷಿಕೆಯ ಕಾವ್ಯ ವಾಚಿಸಿದರು. ರಾಮೇಶ್ವರಪ್ಪ ಅವರು ಯುಗದ ಸೂರ್ಯನೇ ಎಂಬ ಕವನವನ್ನು ವಾಚಿಸಿದಾರು. ಉಮೇಶ್ ಬಾಬು ಮಠದ್ ಅವರು ಬೇಕಾಗಿದ್ದಾರೆ ಎಂಬ ಕವನ ವಾಚಿಸಿದರು ಮನುಷ್ಯ ಸಂಬಂಧ, ಬಾಂಧವ್ಯ ದ ಬಗ್ಗೆ ತಿಳಿಸಿದರು. ದೇವೂ ಮಾಕೊಂಡ ಅವರು ನಗುವೇ ಒಮ್ಮೆ ನಕ್ಕುಬಿಡು ಎಂಬ ಕವನವನ್ನು ವಾಚಿಸಿ ನಗು ಮನುಷ್ಯನಿಗೆ ಎಷ್ಟು ಮುಖ್ಯ ಎಂಬುದರ ಮಹತ್ವನ್ನು ತಿಳಿಸಿದರು. ಒಟ್ಟು 34 ಕವಿಗಳು ತಮ್ಮದೇ ಆದಂತಹ ಕವಗಳನ್ನು ತಮ್ಮದೇ ಆದ ಭಾಷೆಯಲ್ಲಿ ವಾಚಿಸಿ ಕನ್ನಡಿಗರ ಮನಸನ್ನು ಗೆದ್ದರು.

ಕವಯತ್ರಿ ಡಾ. ಮಲ್ಲಿಕಾಘಂಟೆ, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಜಿ. ಎಸ್. ಸೋಮಶೇಖರ್, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಪ್ರೊಕೆ ಲೋಕಾಕ್ಷಿ, ಮೈಸೂರು ಮಹಾನಗರ ಪಾಲಿಕೆಯ ವಲಯದ ಕಚೇರಿಗೆ -2 ಅಭಿವೃದ್ಧಿ ಅಧಿಕಾರಿಗಳಾದ ಚೇತನ್ ಬಾಬು ಎಂ. ಅಧಿಕಾರೇತರ ಸಮಿತಿಯ ಅಧ್ಯಕ್ಷರಾದ ಪಾಳ್ಯ ಸುರೇಶ್, ಉಪಾಧ್ಯಕ್ಷರಾದ ಮನೋನ್ಮಣಿ ಹಾಗೂ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Call Now Button