ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ 2025ರ ಕವಿಗೋಷ್ಠಿಯನ್ನು ವಿಶೇಷವಾಗಿ ಆಯೋಜಿಸಲಾಗಿದ್ದು, ಸೆಪ್ಟೆಂಬ್ 23 ರಿಂದ 27 ರವರೆಗೆ 5 ದಿನಗಳ ಕಾಲ ಜನತೆಗೆ “ಪಂಚ ಕಾವ್ಯದೌತಣ” ಉಣಬಡಿಸಲಿದೆ ಹಾಗೂ ನಾಡಗೀತೆಗೆ 100 ವರ್ಷ ಪೂರೈಸಿರುವ ಹಿನ್ನೆಲೆ ಈ ಬಾರಿ ಕವಿಗೋಷ್ಠಿಯ ಮೊದಲ ದಿನ “ನಾಡಗೀತೆಗೆ ನೂರರ ಸಂಭ್ರಮ ಸಾವಿರಾರು ಸ್ವರಗಳ ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪ್ರಸಿದ್ಧ ಸಂಗೀತಗಾರ ಕಂಠದಲ್ಲಿ ಏಕಕಾಲದಲ್ಲಿ ನಾಡಗೀತೆ ಮೊಳಗಲಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲ ಸಚಿವರಾದ ಎಂ.ಕೆ.ಸವಿತಾ ತಿಳಿಸಿದರು.
ನಗರದ ಮಾನಸ ಗಂಗೊತ್ರಿಯ ಬಯಲು ರಂಗಮಂದಿರದಲ್ಲಿ ಶನಿವಾರ ಮೈಸೂರು ದಸರಾ ಕವಿಗೋಷ್ಠಿ ಉಪಸಮಿತಿ ಮತ್ತು ಮೈಸೂರು ವಿಶ್ವ ವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪಂಚ ಕಾವ್ಯದೌತಣ ಎಂಬ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಡಗೀತೆಗೆ 100 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಮಾನಸ ಗಂಗೋತ್ರಿಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿರುವ ರಾಷ್ಟ್ರಕವಿ ಕುವೆಂಪು ರವರ ಸ್ಮರಣಾರ್ಥವಾಗಿ ಸೆಪ್ಟೆಂಬರ್ 23 ರಂದು “ನಾಡಗೀತೆಗೆ ನೂರರ ಸಂಭ್ರಮ ಸಾವಿರಾರು ಸ್ವರಗಳ ಸಂಗಮ ಎಂಬ ಘೋಷವಾಕ್ಯದಲ್ಲಿ 100 ಪ್ರಖ್ಯಾತ ಸಂಗೀತ ಕಲಾತಂಡಗಳೊಂದಿಗೆ ವಿವಿಧ ಕಾಲೇಜುಗಳಿಂದ ಸುಮಾರು 15 ರಿಂದ 20 ಸಾವಿರಾರು ವಿದ್ಯಾರ್ಥಿಗಳು, ಪ್ರಸಿದ್ಧ ಸಂಗೀತಗಾರರು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡುವುದರ ಮೂಲಕ ರಾಷ್ಟ್ರಕವಿ ಕುವೆಂಪು ರವರಿಗೆ ನಮನ ಸಲ್ಲಿಸಲಾಗುವುದು ಎಂದರು.
ಬಳಿಕ ಕವಿಗೋಷ್ಟಿ ಉಪ ಸಮಿತಿಯ ಕಾರ್ಯದರ್ಶಿಗಳಾದ ಲೋಲಾಕ್ಷಿಯವರು ಮಾತನಾಡಿ, ಈ ಬಾರಿಯ ದಸರಾ ಕವಿಗೊಷ್ಠಿಯನ್ನು “ಪಂಚ ಕಾವ್ಯದೌತಣ” ಪರಿಕಲ್ಪನೆಯಡಿಯಲ್ಲಿ 5 ದಿನಗಳ ಕಾಲ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕವಿಗೊಷ್ಠಿ ನಡೆಯಲಿದ್ದು ಸೆಪ್ಟೆಂಬರ್ 23 ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಘನ ಉಪಸ್ಥಿತರಿರುವ ಬಗ್ಗೆ ತಿಳಿಸಿದರು.
ಕವಿಗೋಷ್ಠಿಯ 5 ದಿನಗಳ ವಿಶೇಷತೆಯನ್ನು ತಿಳಿಸಿದ ಅವರು, ಸೆಪ್ಟೆಂಬರ್ 23 ರಂದು ಪ್ರಭಾತ ಎಂಬ ಪರಿಕಲ್ಪನೆಯಲ್ಲಿ ಕವಿಗೊಷ್ಠಿ ನಡೆಯಲಿದ್ದು, ಪ್ರೊ. ಅರವಿಂದ ಮಾಲಗತ್ತಿ ಉದ್ಘಾಟಿಸಲಿದ್ದಾರೆ. ಸೆ.24 ರಂದು ಪ್ರಚುರ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಖ್ಯಾತ ಗೀತ ರಚನಾಕಾರರಾದ ಜೋಗಿ ಪ್ರೇಮ್ ಅವರು ಉದ್ಘಾಟಿಸಲಿದ್ದಾರೆ.
ಸೆ.25 ರಂದು ಪ್ರಜ್ವಲ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಖ್ಯಾತ ಗೀತ ರಚನಾಕಾರ ಪ್ರಮೋದ ಮರವಂತೆ ಅವರು ಉದ್ಘಾಟಿಸಲಿದ್ದಾರೆ.
ಸೆ.26ರಂದು ಪ್ರತಿಭಾ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಖ್ಯಾತ ಜಾನಪದ ತಜ್ಞರಾದ ಪ್ರೋ.ನಂಜಯ್ಯ ಹೊಂಗನೂರು ರವರು ಉದ್ಘಾಟಿಸಲಿದ್ದಾರೆ ಸೆ.27 ರಂದು ಪ್ರಬುದ್ಧ ಪರಿಕಲ್ಪನೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಖ್ಯಾತ ಕವಿಗಳಾದ ಸಿ.ಪಿ.ಕೃಷ್ಣಕುಮಾರ್ ರವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪವಿಶೇಷಾಧಿಕಾರಿ ಜಿ.ಸೋಮಶೇಖರ್, ಸಮಿತಿ ಸದಸ್ಯರಾದ ನಾಗರಾಜ್ ಬೇರಿ, ಪ್ರೊ.ಸಪ್ನ, ಪ್ರೊ. ಜ್ಯೋತಿ, ಪ್ರೊ. ನವಿತಾ ತಿಮ್ಮಯ್ಯ, ಪ್ರೋ.ಗೀತಾ ಹಾಗೂ ಪ್ರೊ.ಶುಭಾ ಉಪಸ್ಥಿತರಿದ್ದರು.


