ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಮಹೋತ್ಸವ ಸಮಿತಿ ಹಾಗೂ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಸೆ.22ರಿಂದ ಅ.1ರವರೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಅವರು ತಿಳಿಸಿದರು.
ನಗರದ ಕಲಾಮಂದಿರದಲ್ಲಿರುವ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಪುಸ್ತಕ ಮೇಳ ಕುರಿತಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಪ್ರಮುಖ ಭಾಗವಾಗಿ ಪ್ರತಿ ವರ್ಷವು ಪುಸ್ತಕ ಮೇಳ ನಡೆಯಲಿದ್ದು, ಈ ಬಾರಿ ಹಿಂದೆಂದಿಗಿಂತಲೂ ವಿಭಿನ್ನವಾಗಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿ ದಿನವೂ ವಿಶೇಷತೆಯನ್ನು ಹೊಂದಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸಂಜೆ 5 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಕಾರ್ಯದರ್ಶಿ ಎಂ.ವಿ. ವೆಂಕಟೇಶ್, ನಿರ್ದೇಶಕರಾದ ಕೆ.ಎಂ.ಗಾಯಿತ್ರಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿನಿತ್ಯ ಬೆಳಿಗ್ಗೆ 10 ರಿಂದ ರಾತ್ರಿ 8.30 ರವರೆಗೆ ನಡೆಯಲಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ನಿತ್ಯವೂ ವಿಶೇಷತೆ ಹೊಂದಿದ್ದು, ಸಾಹಿತಿಗಳೊಂದಿಗೆ ಸೆಲ್ಫಿ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಗೋಷ್ಠಿಗಳು ನಡೆಯಲಿದೆ. ಜೊತೆಗೆ ಪ್ರತಿದಿನ ಬೆಳಿಗ್ಗೆ 11ಗಂಟೆಗೆ ಇದುವರೆವಿಗೂ ಬಿಡುಗಡೆ ಕಾಣದಿರುವ ವಿವಿಧ ಪುಸ್ತಕಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡುವ ಮೂಲಕ ಲೇಖಕರನ್ನು ಪ್ರೋತ್ಸಾಹಿಸಲಾಗುವುದೆಂದರು.
ಪುಸ್ತಕ ಮೇಳ ಉದ್ಘಾಟನೆಗೂ ಮುನ್ನ ಬೆಳಿಗ್ಗೆ 10.30 ಕ್ಕೆ ಚಾಮುಂಡಿ ಬೆಟ್ಟದ ಆವರಣದಲ್ಲಿ ನಡೆಯಲಿರುವ ದಸರಾ ಉದ್ಘಾಟನಾ ಸಮಾರಂಭದಲ್ಲಿ
ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಕುರಿತು ಬರೆದಿರುವ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ಲೇಖಕ ಶಿವಾನಂದ್ ಅವರ ಬದುಕು ಬರೆಹ ಎಂಬ 350 ಪುಟ ಹೊಂದಿರುವ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಬಿಡುಗಡೆ ಮಾಡಲಿದ್ದಾರೆ ಎಂದರು.
ಇನ್ನು ಲೇಖಕರು, ಪ್ರಕಾಶಕರಿಗೆ ಸಂಪರ್ಕ ಸೇತುವೆಯಾಗಿ ಪುಸ್ತಕ ಮೇಳ ಆಯೋಜನೆಗೊಂಡಿದ್ದು, ಒಟ್ಟು 90 ಮಳಿಗೆಗಳಲ್ಲಿ ಸುಮಾರು 50 ಸಾವಿರ ಪುಸ್ತಕಗಳು, ಓದುಗರನ್ನು ಸೆಳೆಯಲಿದ್ದು, ಪುಸ್ತಕ ಪ್ರೇಮಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಮೈಸೂರು ನಗರದಾದ್ಯಂತ ಸಂಚರಿಸಲು ಸೆ.20 ರಂದು ಬೆಳಿಗ್ಗೆ 11 ಗಂಟೆಗೆ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಪ್ರತಿಮೆ ಮುಂಭಾಗದಿಂದ ಪುಸ್ತಕ ರಥವು ಸಂಚರಿಸಲಿದ್ದು, ಜಿಲ್ಲಾಧಿಕಾರಿಯವರು ಈ ರಥಕ್ಕೆ ಚಾಲನೆ ನೀಡಲಿದ್ದಾರೆ.
ಸಾಹಿತಿಗಳೊಂದಿಗೆ ಸೆಲ್ಪಿ
ಸೆ. 23ರಂದು ಡಾ.ಎಲ್.ಎನ್.ಮುಕುಂದರಾಜ್, ವಸುಧೇಂದ್ರ, ಸೆ.24ರಂದು ಡಾ.ಸುಕನ್ಯಾ ಮಾರುತಿ, ಡಾ.ರಾಜಪ್ಪದಳವಾಯಿ, ಸೆ.25ರಂದು ನರಸಿಂಹಮೂರ್ತಿ, ಸೆ.26ರಂದು ಶಂಕರ್ ಅಶ್ವತ್, ಸೆ.28ರಂದು ಪ್ರೊ.ಎಂ.ಕೃಷ್ಣೇಗೌಡ, ಸೆ.29ರಂದು ಡಾ.ಅರವಿಂದ ಮಾಲಗತ್ತಿ ಹಾಗೂ ಸೆ.30ರಂದಿ ಡಾ.ಟಿ.ವಿ.ವೆಂಕಟಾಚಲಶಾಸ್ತ್ರೀ ಪ್ರತಿ ಮಳಿಗೆಗಳಿ ಭೇಟಿ ನೀಡಿ ಸಾಹಿತಿಗಳೊಂದಿಗೆ ಸೆಲ್ಫಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಸಮನ್ವಯಾಧಿಕಾರಿ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕರಾದ ಡಾ.ನಂಜಯ್ಯ ಹೊಂಗನೂರು, ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಸೇರಿದಂತೆ ಸಮಿತಿ ಸದಸ್ಯರಾದ ರಾಜಶೇಖರ್ ಕದಂಬ, ಚಂದ್ರಶೇಖರ್, ಡಾ.ಮಹೇಶ್ ಚಿಕ್ಕಲೂರು, ಸುಚಿತ್ರಾ, ಮೈ.ನಾ.ಲೋಕೇಶ್, ಕೆ.ಎಸ್.ಶಿವರಾಂ, ರವಿನಂದನ್ ಹಾಗೂ ಪ್ರಮೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


