Online News in ಕನ್ನಡ

ʻಅಂಬೇಡ್ಕರ್‌ ವಿಚಾರಧಾರೆಗಳನ್ನು ಮರೆಮಾಚುವ ಹುನ್ನಾರ ನಡೆಯುತ್ತಿದೆʼ

ಮೈಸೂರು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಒಂದು ವರ್ಗದಲ್ಲಿ ಗುರುತಿಸಿಕೊಳ್ಳದೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಜ್ಞಾನ ಪ್ರೌಢಿಮೆಯನ್ನು ಹರಿಸಿದ್ದಾರೆ. ಆದರೆ, ಅವರ ವಿಚಾರಧಾರೆಗಳನ್ನು ಹಂತ ಹಂತವಾಗಿ ಪಠ್ಯ ಪುಸ್ತಕದಿಂದ ತೆಗೆದುಹಾಕುವ ಹುನ್ನಾರ ನಡೆಯುತ್ತಿದೆ ಎಂದು ಪ್ರೊ. ಕೆ.ಎಂ.ಪ್ರಸನ್ನಕುಮಾರ್‌ ಕಳವಳ ವ್ಯಕ್ತಪಡಿಸಿದರು. ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ೬೯ನೇ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಅವರು, ಬಹಳಷ್ಟು ಜನರಿಗೆ ಕೊನೆಯ ದಿನಗಳ ಬಗ್ಗೆ ಭಿನ್ನ ಅಭಿಪ್ರಾಯಗಳಿದ್ದು ಅದನ್ನು ನಾವು ಅಧ್ಯಯನಗಳ ಮೂಲಕ ನಿವಾರಿಸಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊನೆಯ ದಿನಗಳಲ್ಲಿ ಅವರ ಆರೋಗ್ಯ ತೀರ ಹದಗೆಟ್ಟಿದ್ದರು ಕೂಡ ಅವರ ಚಿಂತನಾಶೀಲತೆ ಮತ್ತು ಉತ್ಸಾಹ ಭರಿತ ಆಲೋಚನೆಗಳು ಎಂದೂ ಕೂಡ ಕುಂದಿರಲಿಲ್ಲ. 1957ರ ಚುನಾವಣೆಗೆ ನಿಲ್ಲಲು ಚುರುಕಾದ ತಯಾರಿ ನಡೆಸಿದರು ಎಂಬ ಐತಿಹಾಸಿಕ ವಿಷಯವನ್ನು ಪ್ರಸ್ತುತಪಡಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನ ಹಂತ ಹಂತವಾಗಿ ಪಠ್ಯಪುಸ್ತಕಗಳಿಂದ ತೆಗೆಯುವ ಹುನ್ನಾರ ನಡೆಯುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದರು.
ಅವರ ಆಶಯದಂತೆ ಪ್ರತಿಯೊಬ್ಬ ದಲಿತನು ಶಿಕ್ಷತನಾಗಿ ಉನ್ನತವಾದ ಜೀವನವನ್ನು ನಡೆಸಿದ ಮೇಲೆ ಮತ್ತೆ ಹಳ್ಳಿಗಳ ಕಡೆ ಮುಖ ಮಾಡಿ ಅಲ್ಲಿರುವ ಅಗತ್ಯರನ್ನು ಮೇಲೆತ್ತುವ ಕೆಲಸವಾದಾಗ ಮಾತ್ರ ಅಂಬೇಡ್ಕರ್ ಅವರ ಆಶಯಗಳಿಗೆ ನಿಜವಾದ ಗೌರವ ಕೊಟ್ಟಂತೆ ಎಂದು ಕರೆ ನೀಡಿದರು.

ʻನನ್ನ ತಂದೆ ೧೯೫೨ರಲ್ಲೇ ಅಸ್ಪೃಶ್ಯತೆ ವಿರುದ್ಧದ ಸಿನಿಮಾ ಮಾಡಿದ್ರುʼ
ಕನ್ನಡದ ಖ್ಯಾತ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಮಾತನಾಡಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ 1952 ರಲ್ಲಿ ಡಾ. ರಾಜಕುಮಾರ್ ಅವರ ಭಕ್ತ ಚೇತ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿ ಅಸ್ಪೃಶ್ಯತೆ ವಿರುದ್ಧ ಹೋರಾಡುವ ಬೀಜವನ್ನು ಅಂದೇ ಬಿತ್ತಿದ್ದರು ಎಂದು ನೆನಪಿಸಿಕೊಂಡರು. ತಾವು ಸಹ ಕೃಷ್ಣ ನೀ ಬೇಗನೆ ಬಾರೋ, ಭೂಮಿ ತಾಯಿಯ ಚೊಚ್ಚಲ ಮಗ ಹೀಗೆ ಹಲವಾರು ದಲಿತ ಮತ್ತು ಅಸ್ಪೃಶ್ಯದ ಕುರಿತಾದ ಸಿನಿಮಾಗಳನ್ನು ನಾನು ನಿರ್ದೇಶನ ಮಾಡಿದ್ದೇನೆ ಎಂದು ಹೇಳಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ಭೂಮಿ ಇರುವವರೆಗೂ ಉಳಿಯುವಂತಹ ಮಹಾ ಚೇತನ ಎಂದು ನುಡಿದರು. 10 ಗಂಟೆಗಳ ಸಂವಿಧಾನಕ್ಕೆ ಸಂಬಂಧಪಟ್ಟ ಸಂಚಿಕೆಯನ್ನು ನಾನು ಸಿದ್ಧಪಡಿಸಿದ್ದೇನೆ. ಇದನ್ನು ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸಚಿವರು ಗಮನಕ್ಕೂ ತಂದಿದ್ದೇನೆ ಆದರೆ ಇದನ್ನು ಶಾಲಾ-ಕಾಲೇಜುಗಳಲ್ಲಿ ಪ್ರಸಾರ ಮಾಡಲು ಯಾವ ಸರ್ಕಾರಗಳು ಮೇಲಾಗಿ ಅಧಿಕಾರಿಗಳು ಇದಕ್ಕೆ ಬೆಂಬಲ ಹಾಗೂ ಗಮನ ಹರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಈಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮೈಸೂರಿನಲ್ಲಿ ಅಂತರರಾಷ್ಟ್ರೀಯ ಫಿಲಂ ಪಾರ್ಕ್ ನಿರ್ಮಾಣ ಮಾಡಲು ಭೂಮಿಯನ್ನು ಕೊಟ್ಟಿದ್ದಾರೆ ಇದು ಆದಷ್ಟು ಬೇಗ ನಿರ್ಮಾಣಗೊಂಡರೆ ಮೈಸೂರಿಗೆ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಸಿಗುತ್ತದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವಿರುವ ದೃಶ್ಯ ಮಾಧ್ಯಮಗಳ ಮೂಲಕ ಅಂಬೇಡ್ಕರ್ ರವರ ಚಿಂತನೆಗಳನ್ನು ಒಳಗೊಂಡಂತಹ ಚಿತ್ರಗಳು ಮತ್ತು ಸರಣಿಗಳನ್ನು ಹೊರ ತರುವುದರಿಂದ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ತಮಿಳು ಮಲಯಾಳಂ ಗಳಲ್ಲಿ ಇಂತಹ ಪ್ರಯೋಗಗಳು ನಡೆದು ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದಿವೆ ಹಾಗೂ ಇಂತಹ ಪ್ರಯತ್ನಗಳು ಕನ್ನಡ ಚಲನಚಿತ್ರ ರಂಗದಲ್ಲೂ ಆಗಬೇಕು ಎಂದು ಒತ್ತಾಯಿಸಿದರು.
ಡಿಸೆಂಬರ್ 5ನೇ ತಾರೀಕು ಬಾಬಾ ಸಾಹೇಬರು ಚಿರ ನಿದ್ರೆ ಜಾರುವ ಮುನ್ನ ಬುದ್ಧ ಮತ್ತು ಆತನ ಧರ್ಮ ಎಂಬ ಕೃತಿಯನ್ನು ಬರೆಯುತ್ತಾ ಇದ್ದರು. ಇದನ್ನು ಅಪೂರ್ಣ ಕೃತಿ ಎಂದು ನಾವು ಕರೆಯುತ್ತೇವೆ. ಆದರೆ ಈ ಕೃತಿಯನ್ನು ಪೂರ್ಣಗೊಳಿಸಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ನಾವು ಭಾವಿಸಿಕೊಳ್ಳಬೇಕು ಅವರು ನಮಗಾಗಿಯೇ ಅದನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಕೊಂಡಾಗ ಮಾತ್ರ ಅವರು ನಡೆದ ಹಾದಿ ನಮಗೆ ಸುಗಮವಾಗಿ ಕಾಣುವುದು ಎಂದು ನುಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿ ಜೆ ವಿಜಯ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ, ಮೈಸೂರು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ ರಮೇಶ್, ಸಿದ್ದರಾಜು, ಉಪಾಧ್ಯಕ್ಷರಾದ ಎಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಎಂ, ಗಿರೀಶ್ ಪಿ.ತೊರೆಮಾವು, ಈಶ್ವರ್ ಎಕ್ಕಡಿ, ಮಾಜಿ ಮೇಯರ್ಗಳಾದ ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಮೋದಮಣಿ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಸುರೇಶ್ ಪಾಳ್ಯ, ಶಿವಶಂಕರಮೂರ್ತಿ, ಸಿದ್ದಯ್ಯ, ಮಹೇಶ್ ನಾಯಕ್, ಶಾಮ. ಯೋಗೇಶ್, ಎಂ ಕೆ ಅಶೋಕ್ , ಮುರುಡೇಶ್, ರಾಮು , ಮೋಹನ್, ಶ್ರೀಮತಿ ಸುಶೀಲಾ ಹಾಗೂ ಇತರರು ಭಾಗವಹಿಸಿದ್ದರು.

Call Now Button