ಬೆಂಗಳೂರು: ರಾಜ್ಯ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರು ತಮ್ಮ ಅಧಿಕೃತ ಕಚೇರಿಯಲ್ಲಿ ಕೆಲ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸಿರುವ ವಿಡಿಯೋಗಳು ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಒಂದೆರಡು ವರ್ಷಗಳಿಂದ ಹಿರಿಯ ಪೊಲೀಸ್ ಅಧಿಕಾರಿಗಳ ರಾಸಲೀಲೆ ವಿಡಿಯೋಗಳು ಹೊರ ಬರಲಿಗೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಸಂದರ್ಭದಲ್ಲೇ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.
ತಮ್ಮ ಅಧಿಕೃತ ಕಚೇರಿಯ ಕುರ್ಚಿಯಲ್ಲಿ ಪೊಲೀಸ್ ಡ್ರೆಸ್‍ನಲ್ಲಿಯೇ ಕುಳಿತು ತಮ್ಮನ್ನು ಭೇಟಿ ಮಾಡಿದ ಮಹಿಳೆಯನ್ನು ಅಪ್ಪಿ, ಚುಂಬಿಸಿ ಅಸಭ್ಯವಾಗಿ ವರ್ತಿಸಿರುವುದು ಸೆರೆ ಹಿಡಿಯಲಾಗಿದೆ. ಇದು ಟ್ರ್ಯಾಪ್ ಮಾಡಲು ನಡೆದಿರುವ ಸಂಚೇ ಅಥವಾ ಪೂರ್ವ ನಿಯೋಜಿತವೇ ಅಥವಾ ದುರುದ್ದೇಶದಿಂದ ಕೂಗಿದ್ದೇ ಎಂಬ ಬಗ್ಗೆ ತನಿಖೆಯಿಂದ ತಿಳಿಯಬೇಕಿದೆ. ಕಾರಣ, ಈವರೆಗೆ ಯಾವೊಬ್ಬ ಮಹಿಳೆಯೂ ತನಗಾಗಿರುವ ಅನ್ಯಾಯದ ಬಗ್ಗೆ ದೂರು ನೀಡಲು ಮುಂದೆ ಬಂದಿಲ್ಲ.
10 ದಿನ ಕಡ್ಡಾಯ ರಜೆ:
ಈನಡುವೆ, ಮೊದ ಮೊದಲು ವೀಡಿಯೋ ಎಐನಲ್ಲಿ ತಯಾರಿಸಲಾಗಿದೆ. ಅದು ಒರಿಜಿನಲ್ ಅಲ್ಲ. ನನ್ನ ವಿರುದ್ಧ ಷಡ್ಯಂತರ ನಡೆದಿದೆ ಎಂದು ಹೇಳಿದ್ದ ಡಾ. ರಾಮಚಂದ್ರ ರಾವ್, ಇವು 8 ವರ್ಷದ ಹಿಂದಿನದ್ದು, ನಾನು ಬೆಳಗಾವಿಯಲ್ಲಿದ್ದೆ. ಅದು ಹೇಗೆ ಮಾಡಿದ್ದಾರೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಗೆ ಯತ್ನಿಸಿದ ಡಾ. ರಾಮಚಂದ್ರ ರಾವ್, ಹತ್ತು ದಿನಗಳ ಕಡ್ಡಾಯ ರಜೆಯ ಮೇಲೆ ತೆರಳಿದ್ದಾರೆ.
ಈ ವಿಡಿಯೋಗಳು ವೈರಲ್ ಆದ ಬೆನ್ನ ಹಿಂದೆಯೇ ಈ ವಿಡಿಯೋ ಚಿತ್ರಿಸಿದ್ದು ಯಾರು ?, ಯಾವ ಉದ್ದೇಶಿದಂದ ಚಿತ್ರಿಸಲಾಗಿತ್ತು ?ಚಿತ್ರಿಸಿದ ಸ್ಥಳ, ದಿನಾಂಕ ಮತ್ತು ಸಮಯ ಏನು ? ಈ ವಿಡಿಯೋಗೂ ಮಹಿಳೆಗೂ ಸಂಬಂಧವಿದೆಯೆ ? ಎಂಬ ಅನೇಕ ಪ್ರಶ್ನೆಗಳು ಎಬ್ಬಿದ್ದು, ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರ ಬೀಳಬೇಕಿದೆ.
ಮೊನ್ನೆಯಷ್ಟೆಯೇ, ರಾಜ್ಯ ಪೊಲೀಸ್ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸರ ಇತ್ತೀಚಿನ ದಿನಗಳ ವರ್ತನೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರಲ್ಲದೆ, ಕಳೆದ ಒಂದು ವರ್ಷದ ಅವಧಿಯಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಶಾಮೀಲಾಗಿರುವುದು ಇಲಾಖೆ ಮತ್ತು ರಾಜ್ಯಕ್ಕೆ ಶೋಭೆ ತರುವ ವಿಷಯವಲ್ಲ. ಪೊಲೀಸ ಅಧಿಕಾರಿಗಳು ಹೆಚ್ಚು ಜಾಗೃತರಾದರೆ ಅಪರಾಧಗಳನ್ನು ತಡೆಗಟ್ಟಬಹುದು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.


