ಮೈಸೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳನ್ನು ಆಧರಿಸಿ ಬಿಜೆಪಿ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ದೂರಿದ್ದಾರೆ. ಈ ಸಂಬಂಧ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಕಾಂಗ್ರೆಸ್ ಹಮ್ಮಿಕೊಂಡಿದ್ದ ಧರ್ಮಸ್ಥಳ ಯಾತ್ರೆ ವೇಳೆ ಮಾತನಾಡಿರುವ ಅವರು, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಬಿಜೆಪಿ ಧರ್ಮಸ್ಥಳ ಚಲೋ ಧರ್ಮಯಾತ್ರೆ ಕೈಗೊಂಡಿತು. ಆ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿತು. ನಮ್ಮ ಸರ್ಕಾರ ಸತ್ಯ ಹೊರ ತರುವ ನಿಟ್ಟಿನಲ್ಲಿ ಎಸ್ ಐಟಿ ರಚನೆ ಮಾಡಿತು. ಆಗ ಸುಮ್ಮನೆ ಇದ್ದ ಬಿಜೆಪಿ ಈಗ ತನಿಖೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ನಮ್ಮ ಸರ್ಕಾರ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದ್ದರೂ ಜನರಲ್ಲಿ ತಪ್ಪು ಭಾವನೆ ಹುಟ್ಟುವಂತೆ ಮಾಡುತ್ತಿದೆ. ಇದರಿಂದ ಅವರ ನಿಲುವು ಸ್ಪಷ್ಟವಾಗುತ್ತದೆ ಎಂದಿದ್ದಾರೆ.


