ನಂಜನಗೂಡು: ಕಳೆದ ನಾಲ್ಕು ದಿನಗಳಿಂದ ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ರೈತರ ಬೆಳೆ ಮತ್ತು ಜೀವಕ್ಕೆ ಸಂಚಕಾರ ತಂದೊಡ್ಡಿದೆ. ಇಂದು ಬೆಳಗ್ಗೆ 8 ಗಂಟೆಯಲ್ಲಿ ಬಳ್ಳೂರು ಹುಂಡಿಯ ಮುಖ್ಯ ರಸ್ತೆಯಲ್ಲಿ ಕಾಣಿಸಿಕೊಂಡ ಐದು ಆನೆಗಳು ರೈತರ ಜಮೀನುಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿವೆ.

ಕೆಲ ದಿನಗಳ ಹಿಂದೆ ಬಳ್ಳೂರುಹುಂಡಿಯ ಬಸವರಾಜು ಮತ್ತು ಮರಿಸ್ವಾಮಿ ಅವರ ಜಮೀನಿನಲ್ಲಿ ಬಾಳೆ, ಕುಂಬಳಕಾಯಿ ಬೆಳೆಯನ್ನು ಹಾನಿ ಮಾಡಿ ಅಪಾರ ನಷ್ಟವನ್ನು ಉಂಟುಮಾಡಿದ್ದವು. ಇದರಿಂದ ರೈತರು ಕಂಗಾಲಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈನಡುವೆ, ಇಂದು ಅರಣ್ಯ ಸಿಬ್ಬಂದಿಗಳ ವಾಹನವನ್ನು ಅಡ್ಡಗಟ್ಟಿದ ಸಂತ್ರಸ್ಥ ರೈತ ತನ್ನ ಆನೆಗಳ ಹಾವಳಿ ತಪ್ಪಿಸುವಂತೆ ಗೋಳಾಡಿದ್ದಾರೆ. ರಾತ್ರಿಯ ವೇಳೆ ಕಾಡಂಚಿನಲ್ಲಿ ಗೇಟ್‌ಗಳು ಹಾಕದೆ ಇರುವುದರಿಂದಲೇ ಆನೆಗಳು ಗ್ರಾಮಕ್ಕೆ ಬರುತ್ತಿವೆ. ಈ ಬಗ್ಗೆ ಅರಣ್ಯ ಸಿಬ್ಬಂದಿಗಳಿಗೆ ಎಷ್ಟೇ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇಂದಿನ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ದೂಷಿಸಿದ್ದಾರೆ.
ಸದ್ಯ ಆನೆಗಳು ಜನರನ್ನು ಅಟ್ಟಾಡಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.


