ಮೈಸೂರು ನಗರದ ಮೂರು ದಿನಗಳ ದೇಸಿ ಎಣ್ಣೆ ಮೇಳ ಆಯೋಜನೆ
ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ. ಕೋವಿಡ್ ನಂತರ ಗ್ರಾಹಕರಲ್ಲಿ ಆರೋಗ್ಯದ ಅರಿವು ಹೆಚ್ಚುತ್ತಿರುವುದರಿಂದ, ಮೂಲೆ ಗುಂಪಾಗಿದ್ದ ಹುಚ್ಚೆಳ್ಳು, ಎಳ್ಳು, ಕುಸುಬೆ, ಹರಳು, ಅಗಸೆ ಮೊದಲಾದ ಎಣ್ಣೆಕಾಳು ಬೆಳೆಗಳಿಂದ ತಯಾರಾಗುವ ಎಣ್ಣೆಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಇದು ರೈತರಿಗೆ ಬೆಳೆ ವೈವಿಧ್ಯತೆ ಹೆಚ್ಚಿಸಿಕೊಳ್ಳಲು ಮತ್ತು ಆದಾಯ ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಹವಾಮಾನ ವೈಪರಿತ್ಯಕ್ಕೆ ಹೈರಾಣಾಗಿರುವ ರೈತರು ಸುಲಭನಾಗಿ ಎಣ್ಣೆಕಾಳು ಬೆಳೆಗಳನ್ನು ಬೆಳೆದುಕೊಳ್ಳಬಹುದು. ಈ ಕುರಿತು ಜಾಗೃತಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವ ೩ ದಿನಗಳ ದೇಸಿ ಎಣ್ಣೆ ಮೇಳ ಸಾಂಸ್ಕೃತಿಕ ನಗರಿಯಲ್ಲಿ ಆಯೋಜಿಸಲಾಗಿದೆ. ನಗರದ ನಂಜರಾಜಬಹುದ್ದೂರ್ ಛತ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ದೇಸಿ ಎಣ್ಣೆ ಮೇಳವನ್ನ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟಿಸಿದರು.

ಮಾರುಕಟ್ಟೆಯಲ್ಲಿ ಸಿಗುವ ಅಡುಗೆ ಎಣ್ಣೆಗೆ ಲಿಕ್ವಿಡ್ ಪ್ಯಾರಾಪಿನ್ ಕಲಬೆರಕೆ ಮಾಡುವುದರಿಂದ ಹೃದಯಾಘಾತ, ಕ್ಯಾನ್ಸರ್, ಸ್ಥೂಲಕಾಯ, ರಕ್ತದೊತ್ತಡ ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬಿಟಿ ಹತ್ತಿಯ ಕಾಳಿನ ಎಣ್ಣೆಯನ್ನು ಅಡುಗೆ ಎಣ್ಣೆಗೆ ಮಿಶ್ರಮಾಡುವುದರಿಂದ ಅನಾರೋಗ್ಯವನ್ನು ಆಹ್ವಾನಿಸಿದಂತಾಗುತ್ತದೆ. ಶುಧ್ಧವಾಗಿ ತಯಾರಿಸಿದ ಗಾಣದ ಎಣ್ಣೆಗಳ ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಸಾಂಪ್ರದಾಯಿಕ ಎಣ್ಣೆಗಳ ಕೃಷಿ ಮತ್ತು ಬಳಕೆಯ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸಲು, ಸಹಜ ಸಮೃದ್ಧ ಸಂಸ್ಥೆಯು ಆಯೋಜಿಸಿರುವ ಮೇಳದಲ್ಲಿ ಮೇಳದಲ್ಲಿ 50ಕ್ಕೂ ಹೆಚ್ಚು ಸಾಂಪ್ರದಾಯಿಕ ಎಣ್ಣೆಗಳನ್ನು ಪರಿಚಯಿಸಲಾಗಿದೆ. ಜೊತೆಗೆ ಎತ್ತಿನ ಗಾಣದಿಂದ ಅಡುಗೆ ಎಣ್ಣೆ ತೆಗೆಯುವ ಹಾಗು ಹರಳೆಣ್ಣೆ ತೆಗೆಯುವ ಪ್ರಾತ್ಯಕ್ಷಿಕೆಯನ್ನು ಮೇಳದಲ್ಲಿ ಖುದ್ದಾಗಿ ನೋಡಬಹುದು. ಅಲ್ಲದೆ ಸಿಎಫ್ಟಿಆರ್ಐ ವಿಜ್ಞಾನಿಗಳು ಕಲಬೆರಕೆ ಎಣ್ಣೆಯನ್ನು ಪತ್ತೆ ಹಚ್ಚುವ ವಿಧಾನವನ್ನು ತೋರಿಸಿಕೊಡಲಿದ್ದಾರೆ.ಆಯುರ್ವೇದ ವೈದ್ಯರಿಂದ ಉಚಿತ ಸಲಹೆ ಮತ್ತು ಎಣ್ಣೆ ಬಳಕೆಯ ಮಾರ್ಗದರ್ಶನ ನೀಡಲಿದ್ದಾರೆ. ಜೊತೆಗೆ ಆಹಾರ ತಜ್ಞರು ವಿವಿಧ ದೇಹ ಪ್ರಕೃತಿಗಳಿಗೆ ಯೋಗ್ಯವಾದ ಎಣ್ಣೆಗಳ ಬಳಕೆಯ ತಿಳಿಸಿಕೊಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಮಂಟೇಸ್ವಾಮಿ ಮಠ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿಗಳಾದ ಶ್ರೀಕಂಠ ಸಿದ್ಧಲಿಂಗ ರಾಜೇ ಅರಸ್, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷರಾದ ಲಾವಣ್ಯ ಬಲ್ಲಾಳ್ ಜೈನ್ , ಸಿಎಫ್ ಟಿ ಆರ್ ಐ ನಿರ್ದೇಶಕರಾದ ಡಾ. ಗಿರಿಧರ್ ಪಾರ್ವತಮಂ ಮತ್ತು ಪ್ರಿಸಿಷನ್ ಮೆಡಿಸಿನ್ ವಿಜ್ಞಾನಿ ಡಾ.ಮಮತ ಶೇಖರ್ ಭಾಗಿಯಾಗಿದ್ದರು.


