Online News in ಕನ್ನಡ

ಭಾರತ ಅಮೇರಿಕಾ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ವಿರೋಧ: ಸಂಸದರ ಕಚೇರಿ ಮುಂದೆ ರೈತರ ಧರಣಿ

ಮೈಸೂರು: ಭಾರತ ಸರಕಾರವು ಅಮೆರಿಕದೊಂದಿಗೆ ಕೃಷಿ ವಿಷಯವಾಗಿ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗ್ರೀನ್‌ ಬ್ರಿಗೆಡ್‌ ಕಾರ್ಯಕರ್ತರು ಮೈಸೂರು ನಗರದಲ್ಲಿರುವ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಕಚೇರಿ ಮುಂದೆ ಧರಣಿ ನಡೆಸಿದರು.
ನಗರದ ಕಾಡಾ ಕಚೇರಿಯಲ್ಲಿರುವ ಸಂಸದರ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಿದ ರೈತರು, ಭಾರತದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದು ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲಾಗುತ್ತಿಲ್ಲ. ಎಲ್ಲೆಡೆ ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇಂತಃ ಸಂದರ್ಭದಲ್ಲಿ ಭಾರತ ಸರಕಾರವು ರೈತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ನಿಟ್ಟಿನಲ್ಲಿ ಅಮೇರಿಕಾ ಜತೆ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿರುವುದು ರೈತರ ಪಾಲಿಗೆ ಮರಣಶಾಸನವಾಗಿದೆ ಎಂದು ಪ್ರತಿಪಾದಿಸಿದರು.
ರೈತ ಮುಖಂಡರಾದ ಕೆ.ಟಿ. ಗಂಗಾಧರ್‌, ಅನಸೂಯಮ್ಮ, ಚುಕ್ಕಿ ನಂಜುಂಡಸ್ವಾಮಿ, ರಾಮಣ್ಣ ಕೆಂಚಲೆರ, ಹೊನ್ನೂರು ಪ್ರಕಾಶ್‌, ಗ್ಯಾರಂಟಿ ರಾಮಣ್ಣ, ಮಂಜು ಕಿರಣ್‌, ಮಲ್ಲಿಕಾರ್ಜುನ ಮೊದಲಾದವರು ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸ್ಥಳೀಯ ರೈತ ನಾಯಕರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಹಸಿರು ಶಾಲು ಪ್ರದರ್ಶಿಸಿದ ರೈತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ಕಾಡಾ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೂಬಸ್ತ್‌ ಮಾಡಲಾಗಿತ್ತು. ಭಾರತ ಸರಕಾರವು ಅಮೇರಿಕದೊಂದಿಗೆ ಕೃಷಿ ಉತ್ಪನ್ನಗಳಾದ ಹಾಲಿನ ಉತ್ಪನ್ನಗಳು, ಮೆಕ್ಕೆಜೋಳ, ಅಕ್ಕಿ, ಹತ್ತಿ, ಸೋಯಾ ಬೀನ್‌, ದ್ವಿದಳ ಧಾನ್ಯಗಳು ಮತ್ತು ಚಿಕನ್‌ ಸಂಬಂಧಿಸಿದಂತೆ ಸುಂಕ ರಹಿತ ಮತ್ತು ಅತಿ ಕಡಿಮೆ ಸುಂಕದ ಆಧಾರದ ಮೇಲೆ ಭಾರತಕ್ಕೆ ಅಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲು ಹೊರಟಿದೆ. ವಿದೇಶಿಯರು ಹೇರಳವಾಗಿ ಬೆಳೆದ ಪದಾರ್ಥಗಳನ್ನು ಕಡಿಮೆ ದರದಲ್ಲಿ ಖರೀದಿಸಿ ಮಾರಿದರೆ ಈ ದೇಶದ ರೈತರ ಪರಿಸ್ಥಿತಿ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

Call Now Button