Online News in ಕನ್ನಡ

ಹನಗೋಡಲ್ಲಿ ಮತ್ತೆ ಹುಲಿ ಉಪಟಳ : ಅರಣ್ಯ ಜೀಪಿಗೆ ಹಸು ಕಟ್ಟಿ ಪ್ರತಿಭಟನೆ

ಹನಗೋಡು: ಇಲ್ಲಿ ನೇಗತ್ತೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಮೇವು ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ನಡೆಸಿ ತೀವ್ರ ತರವಾಗಿ ಗಾಯಗೊಳಿಸಿರುವ ಘಟನೆ ಮಂಗಳವಾರ ಹಾಡ ಹಗಲೇ ನಡೆದಿದೆ. ಇದರಿಂದ ರೊಚ್ಚಿಗೆದ್ದಿರುವ ರೈತರು ಅರಣ್ಯ ಸಿಬ್ಬಂದಿಗಳನ್ನು ಘೆರಾವ್‌ ಮಾಡಿ ಪ್ರತಿಭಟನೆ ನಡೆಸಿದ ಘಟನೆಯೂ ಜರುಗಿದೆ.
ಹುಣಸೂರು ವನ್ಯಜೀವಿ ವಿಭಾಗದ ಶೆಟ್ಟಹಳ್ಳಿ ಲಕ್ಕಪಟ್ಟಣ ಅರಣ್ಯದಂಚಿನ ನೇಗತ್ತೂರು ಗ್ರಾಮದ ಸೈಯದ್ ಪೀರ್ ರವರ ಹಸುವೆ ಹುಲಿ ದಾಳಿಯಿಂದ ತೀವ್ರತರವಾಗಿ ಗಾಯಗೊಂಡು ಸಾವು ಬದುಕಿನೊಡನೆ ಹೋರಾಡುತ್ತಿದೆ.
ಮಂಗಳವಾರ ಸೈಯದ್ ಪೀರ್ ಹಾಗೂ ಇವರ ಕಿರಿಯ ಮಗ ಅಸ್ಲಂಪಾಷಾ ರವರು ತಮ್ಮ ಜಮೀನಿನಲ್ಲಿ ಹಸುಗಳನ್ನು ಮೇವು ಮೇಯಲು ಬಿಟ್ಟು ಪಕ್ಕದ ಸಿಂಡೆನಹಳ್ಳಿ ಗ್ರಾಮದ ಹರ್ಷಿತ್ ಎಂಬುವರ ಟ್ಯಾಕ್ಟರ್ ನಲ್ಲಿ ಜಮೀನನ್ನು ಉಳಿಮೆ ಮಾಡಿಸುತ್ತಿದ್ದರು.

 

ಈ ವೇಳೆ ಪಕ್ಕದಲ್ಲಿರುವ ಶೆಟ್ಟಹಳ್ಳಿ ಲಕ್ಕಪಟ್ಟಣ ಅರಣ್ಯದಿಂದ ಹೊರಬಂದ ಹುಲಿಯು ಮೇವು ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ನಡೆಸಿದೆ. ಗಾಯಗೊಂಡ ಹಸು ಚೀರಾಟ ನೋಡಿದ ಟ್ಯಾಕ್ಟರ್ ಡ್ರೈವರ್ ಹರ್ಷಿತ್ ಹಾಗೂ ಅಸ್ಲಾಂ ಪಾಷಾ ಕೂಗಾಟ ಚೀರಾಟ ನಡೆಸಿ ಟ್ಯಾಕ್ಟರನಲ್ಲಿ ಜೋರು ಶಬ್ದ ಮಾಡಿದ್ದಾರೆ. ಇದರಿಂದ ಬೆದರಿದ ಹುಲಿ ಹಸುವನ್ನು ಟ್ರಾಕ್ಟರ್ ನತ್ತ ಬರಲಾರಂಬಿಸಿದ್ದನ್ನು ಗಮನಿಸಿ ಹೆದರಿ ಹರ್ಷಿತ್ ಮತ್ತು ಅಸ್ಲಾಂ ಪಾಷ ಟ್ಯಾಕ್ಟರ್ ನ್ನು ಜೋರಾಗಿ ಓಡಾಟ ನಡೆಸಿದ್ದರಿಂದ ಹುಲಿಯು ಬೆದರಿ ಮತ್ತೆ ಕಾಡಿನೊಳಗೆ ಸೇರಿಕೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಹುಣಸೂರು ಆರ್ ಎಫ್ ಓ ಸುಬ್ರಮಣ್ಯ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡಿರುವ ಹಸುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಅರಣ್ಯ ಜೀಪಿಗೆ ಹಸು ಕಟ್ಟಿ ಪ್ರತಿಭಟನೆ

ಪ್ರತಿನಿತ್ಯ ಹುಲಿಯ ಉಪಟಳದಿಂದ ಬೇಸತ್ತಿರುವ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯಬೇಕು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸ್ಥಳಕ್ಕೆ ಭೇಟಿ ನೀಡಿದ ಆರ್.ಎಫ್ .ಓ ಸುಬ್ರಹ್ಮಣ್ಯ ರವರ ಜೀಪಿಗೆ ಗಾಯಗೊಂಡಿರುವ ಹಸುವನ್ನು ಕಟ್ಟಿ ಘೇರಾವು ಹಾಕಿದ್ದಾರೆ.
ಈ ವೇಳೆ ಆರ್ ಎಫ್ ಒ ಸುಬ್ರಹ್ಮಣ್ಯ ರವರು ಈಗಾಗಲೇ ವಿಷಯವನ್ನು ಹಿರಿಯ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಥರ್ಮಲ್‌ ಡ್ರೋಣ್ ಹಾಗೂ ಸಾಕಾನೆಗಳ ಮೂಲಕ ಕೂಂಬಿಂಗ್ ಕಾರ್ಯಚರಣೆ ಕೈಗೊಂಡಿದ್ದು, ಹುಲಿಯು ಶೆಟ್ಟಹಳ್ಳಿ ಅರಣ್ಯದೊಳಗಿರುವುದರಿಂದ ಕಾಡಂಚಿನಲ್ಲಿ ಜಮೀನಿರುವ ರೈತರು ಜಮೀನಿಗೆ ಒಂಟಿಯಾಗಿ ತಿರುಗಾಡದಂತೆ ಮನವಿ ಮಾಡಿದ್ದಾರೆ.
ಕಳೆದ ವಾರ ಹಿಂದೆ ಮುತ್ತುರಾಯನಹೊಸಹಳ್ಳಿಯ ಕಲ್ ಬೆಟ್ಟದಲ್ಲಿ ಹುಲಿ ಓಡಾಡುತ್ತಿರುವುದನ್ನು ಗ್ರಾಮಸ್ಥರು ಮೊಬೈಲ್ ಮೂಲಕ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದನ್ನು ಸ್ಮರಿಸಬಹುದು.

 

Call Now Button