ಮೈಸೂರು: ನೂರಾರು ಯುವಕ-ಯುವತಿಯರು, ಟ್ರಿನ್ ಟ್ರೀನ್ ಸೈಕಲ್ ಏರಿ ಸಾವಾರಿ ಮಾಡಿ ಮೈಸೂರಿನಲ್ಲಿರುವ ಪ್ರಮುಖ ಪಾರಂಪರಿಕ ಕಟ್ಟಡಗಳ ಇತಿಹಾಸ, ಅದರ ಹಿನ್ನೆಲೆ, ಪ್ರಾಮುಖ್ಯತೆ, ಹಾಗೂ ವಾಸ್ತುಶಿಲ್ಪಗಳ ಬಗ್ಗೆ ಮಾಹಿತಿ ಪಡೆದು ಪುಳಕಿತರಾದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಾರಂಪರಿಕ ಸೈಕಲ್ ಸವಾರಿ ಆಯೋಜಿಸಿದ್ದು, ಬೆಳ್ಳಂಬೆಳಗ್ಗೆ ‘ನಮ್ಮ ಪಾರಂಪರೆ ನಮ್ಮ ಹೆಮ್ಮೆ’ ಎಂಬ ಟೀ ಶರ್ಟ್ ಧರಿಸಿ ಹಾಜರಿದ್ದ ನೂರಾರು ಜನರು ಸೈಕಲ್ ಸವಾರಿ ಮಾಡುತ್ತಾ ಪುರಭವನ, ದೊಡ್ಡ ಗಡಿಯಾರ,10ನೇ ಚಾಮರಾಜೇಂದ್ರ ವೃತ್ತ, ಅರಮನೆ,ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ ಸೇರಿದಂತೆ ನಗರದ 20 ಪಾರಂಪರಿಕ ಕಟ್ಟಡಗಳತ್ತಾ ಸಾಗಿ ಆಯಾ ಕಟ್ಟಡದ ಮುಂಭಾಗದಲ್ಲಿ ಇತಿಹಾಸ ತಜ್ಞರಾದ ಪ್ರೋ. ಡಾ.ಶೆಲ್ವ ಪಿಳೈ ಅಯ್ಯಾಂಗಾರ್ ಹಾಗೂ ನಿವೃತ್ತ ಪ್ರೊ. ರಂಗನಾಥ ರವರು ಕಟ್ಟಡಗಳ ಹಿನ್ನೆಲೆ, ವಾಸ್ತುಶಿಲ್ಪ ಸೇರಿ ರೋಚಕ ಇತಿಹಾಸದ ಸಂಗತಿಗಳನ್ನು ತಿಳಿಸಿದರು.
ರಂಗಚಾರ್ಲು ಪುರಭವನದ ಮುಂಭಾಗ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕಲ್ ಸವಾರಿ ಮಾಡಿದ ಮೈಸೂರಿಗ ಅಲ್ಟ್ರಾ ಸೈಕಲಿಸ್ಟ್ ನವೀನ್ ಡಿ.ಎಸ್.ಸೌಲಂಕಿ ರವರು ಹಸಿರು ಬಾವುಟ ತೋರಿ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 10 ದಿನಗಳಲ್ಲಿ 15 ಗಂಟೆಗಳ ಅವಧಿಯಲ್ಲಿ 3758 km ಸೈಕ್ಲಿಂಗ್ ಮಾಡಿರುವುದು ಹೆಮ್ಮೆ ತಂದಿದೆ. ದೇಹವನ್ನು ಆರೋಗ್ಯ ಹಾಗೂ ಸದೃಢವಾಗಿ ಇಟ್ಟುಕೊಳ್ಳಬೇಕು. ಪ್ರತಿದಿನ ಸೈಕಲ್ಗಿಂಗ್ ಅಭ್ಯಾಸ ಮಾಡಿ, ಇದಕ್ಕೆ ಮೈಸೂರು ಉತ್ತಮವಾದ ಸ್ಥಳವಾಗಿದೆ ಎಂದರು.

ಪಾರಂಪರಿಕ ಸೈಕಲ್ ಸವಾರಿ ಹಾದಿ: ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ, ಸಿಲ್ವರ್ ಜೂಬಿಲಿ ಕ್ಲಾಕ್ ಟವರ್(ದೊಡ್ಡ ಗಡಿಯಾರ), ಫ್ರಿಮೇಸನ್ಸ್ ಕ್ಲಬ್, ಹತ್ತನೆ ಚಾಮರಾಜ ಒಡೆಯರ್ ವೃತ್ತ, ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ಡೌನ್ ಕಟ್ಟಡ, ಜಗನ್ ಮೋಹನ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಕಛೇರಿ, ಪದ್ಮಾಲಯ, ಹಳೇ ಜಿಲ್ಲಾಧಿಕಾರಿಗಳ ಕಛೇರಿ, ಕ್ರಾಫರ್ಡ್ ಹಾಲ್, ಮೆಟ್ರೊಪೋಲ್ ವೃತ್ತ, ರೈಲ್ವೆ ನಿಲ್ದಾಣ, ಕೃಷ್ಣ ರಾಜೇಂದ್ರ ಆಸ್ಪತ್ರೆ(ಕೆ.ಆರ್.ಆಸ್ಪತೆ) ವೃತ್ತ, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಕಾವೇರಿ ಎಂಪೋರಿಯಮ್, ಗಾಂಧಿ ವೃತ್ತ ಹಾದು ರಂಗಾಚಾರ್ಲು ಪುರಭವನ(ಟೌನ್ಹಾಲ್) ಹತ್ತಿರ ಮುಕ್ತಾಯಗೊಂಡಿತು
ಕಾರ್ಯಕ್ರಮದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರಾದ ಎ.ದೇವರಾಜು, ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳ, ತಾರಕೇಸ್ ಹಾಗೂ ಅಂಬರೀಶ್ ಸೇರಿ ಹಲವರು ಉಪಸ್ಥಿತರಿದ್ದರು.


